ಹೊನ್ನಾವರದ ಯುವಕರ ನಡುವೆ ನಡೆದ ಗಲಾಟೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಹೊಡೆದಾಟದ ನೈಜ ಕಾರಣ ಗೊತ್ತಾಗಿದೆ. ಕುದ್ರಗಿಯ ವಿವೇಕ ನಾಯ್ಕ ಅವರು ಮೊಹಮದ್ ಅದ್ನಾನ್ ಅವರ ಬೈಕ್ ಓವರ್ ಟೆಕ್ ಮಾಡಿದ್ದೇ ಗಲಾಟೆಗೆ ಕಾರಣವಾಗಿದ್ದು, ಇದೇ ವಿಷಯಕ್ಕೆ ಜಗಳ ಮಾಡಿದ ಮಹಮದ್ ಅದ್ನಾನ್ ಅವರು ವಿವೇಕ ನಾಯ್ಕ ಅವರಿಗೆ ಚಾಕು ಚುಚ್ಚಿದ್ದಾರೆ!
ಸಪ್ಟೆಂಬರ್ 18ರ ಮಧ್ಯಾಹ್ನ ಸಂಶಿ ಕುದ್ರಗಿಯ ವಿವೇಕ ಸುರೇಶ ನಾಯ್ಕ ಅವರು ಗೇರುಸೊಪ್ಪಾದಿಂದ ಉಪ್ಪೋಣಿ ಕಡೆಗೆ ಬೈಕಿನಲ್ಲಿ ಬರುತ್ತಿದ್ದರು. ವಿವೇಕ ನಾಯ್ಕ ಅವರ ಜೊತೆ ಸುದೀಪ ನಾಯ್ಕ ಅವರು ಅದೇ ಬೈಕಿನಲ್ಲಿ ಚಲಿಸುತ್ತಿದ್ದರು. ಮಾವಿನಹೊಳೆ ಬಸ್ ನಿಲ್ದಾಣದ ಬಳಿ ವಿವೇಕ ನಾಯ್ಕ ಅವರು ಮುಂದೆ ಹೋಗುತ್ತಿದ್ದ ಬೈಕನ್ನು ಹಿಂದಿಕ್ಕಿದರು. ಇದರಿಂದ ಆ ಬೈಕು ಓಡಿಸುತ್ತಿದ್ದ ಹೊನ್ನಾವರ ಸಂಶಿಯ ಮಹಮದ್ ಅದ್ನಾನ್ ಸಿಟ್ಟಾದರು. ಮಹಮದ್ ಅದ್ನಾನ್ ಜೊತೆಗಿದ್ದ ಮಾವಿನಹೊಳೆಯ ಪ್ರದೀಪ ಅಂಬಿಗ ಅವರು ಕೋಪಗೊಂಡರು. ಈ ಹಿನ್ನಲೆ ವಿವೇಕ ನಾಯ್ಕ ಅವರು ತಮ್ಮ ಬೈಕ್ ಓವರ್ ಟೆಕ್ ಮಾಡುವಾಗ ಮಹಮದ್ ಅದ್ನಾನ್ ಅವರು ಅಸಭ್ಯವಾಗಿ ಕೈ ಸನ್ನೆ ಮಾಡಿದರು.
ಅಸಭ್ಯವಾಗಿ ಕೈ ಸನ್ನೆ ಮಾಡಿದ ಕಾರಣ ವಿವೇಕ ನಾಯ್ಕ ಅವರು ತಮ್ಮ ಬೈಕ್ ನಿಲ್ಲಿಸಿದರು. ಅಲ್ಲಿಗೆ ಬಂದ ಮಹಮದ್ ಅದ್ನಾನ್ ಅವರನ್ನು ಕೆಟ್ಟದಾಗಿ ವರ್ತಿಸಿದ ಬಗ್ಗೆ ಪ್ರಶ್ನಿಸಿದರು. ಈ ವೇಳೆ ವಿವೇಕ ನಾಯ್ಕ ಹಾಗೂ ಮಹಮದ್ ಅದ್ನಾನ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ಜಗಳ ಇನ್ನಷ್ಟು ದೊಡ್ಡವಾಗಿದ್ದು, ಮಹಮದ್ ಅದ್ನಾನ್ ತಮ್ಮ ಕಿಸೆಯಲ್ಲಿದ್ದ ಚಾಕು ತೆಗೆದರು. ನೇರವಾಗಿ ವಿವೇಕ್ ನಾಯ್ಕ ಅವರಿಗೆ ಚುಚ್ಚಿದರು. ಗಾಯಗೊಂಡ ವಿವೇಕ ನಾಯ್ಕ ಅವರು ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಅವರ ಆರೋಗ್ಯ ಸುಧಾರಿಸುತ್ತಿದೆ.
ಏಕಾಏಕಿ ಪ್ರಚೋದನೆಯಾಗಿ ಮಹಮದ್ ಅದ್ನಾನ್ ಚಾಕು ಇರಿದಿದ್ದು, ಪೊಲೀಸರು ಮಹಮದ್ ಅದ್ನಾನ್ ಜೊತೆ ಅವರ ಬೈಕಿನಲ್ಲಿ ಜೊತೆಯಿದ್ದ ಪ್ರದೀಪ ಅಂಬಿಗ ಅವರನ್ನು ಬಂಧಿಸಿದ್ದಾರೆ. ಯಾವುದೇ ಹಳೆಯ ದ್ವೇಷ ಅಥವಾ ಕೋಮು ದ್ವೇಷದಿಂದ ಈ ದಾಳಿ ನಡೆದಿಲ್ಲ ಎಂದು ತನಿಖೆ ನಡೆಸಿದ ಪೊಲೀಸರು ಸ್ಪಷ್ಠಪಡಿಸಿದ್ದಾರೆ. ಹೀಗಾಗಿ ಯಾವುದೇ ಸುಳ್ಳು ಸುದ್ದಿ ಹರಡದಂತೆ ಪೊಲೀಸರು ಸೂಚಿಸಿದ್ದು, ಸುಳ್ಳು ಸುದ್ದಿ ಹರಡಿದವರ ವಿರುದ್ಧವೂ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.
Discussion about this post