ಕುಮಟಾ ಹೊಸ ಹಾರವಟ್ಟಾದ ವಿನೋದ ಭಂಡಾರಿ ಹಾಗೂ ಭಟ್ಕಳ ಗಾಂಧೀನಗರ ಹೆಬಳೆಯ ಈಶ್ವರ ನಾರಾಯಣ ನಾಯ್ಕ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಅವರಿಬ್ಬರು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ.
ಕುಮಟಾ ಹೊಸ ಹಾರವಟ್ಟಾದ ವಿನೋದ ಭಂಡಾರಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಭಟ್ಕಳ ಗಾಂಧೀನಗರ ಹೆಬಳೆಯ ಈಶ್ವರ ನಾರಾಯಣ ನಾಯ್ಕ ಅವರಿಗೂ ಇಂಥಹುದೇ ಎಂಬ ಒಂದು ಉದ್ಯೋಗವಿಲ್ಲ. ಹೀಗಾಗಿ ಅವರಿಬ್ಬರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮಟ್ಕಾ ಬುಕ್ಕಿಯಾಗಿ ಗುರುತಿಸಿಕೊಂಡಿದ್ದಾರೆ. ಗೂಡಂಗಡಿಕಾರರು, ಬಡ ವ್ಯಾಪಾರಿಗಳು ಸೇರಿ ಅನೇಕರಿಗೆ ಕಮಿಷನ್ ಆಸೆ ತೋರಿಸಿ ಜೂಜಾಟವನ್ನು ಉತ್ತೇಜಿಸುತ್ತಿದ್ದಾರೆ.
ಭಟ್ಕಳ ಉತ್ತರಕೊಪ್ಪದ ಆನಂದ ಜಟ್ಟಾ ನಾಯ್ಕ ಎಂಬ ವ್ಯಾಪಾರಿ ಮೇಲೆ ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಮಟ್ಕಾ ವ್ಯವಹಾರದ ಸಾಕ್ಷಿಗಳು ಸಿಕ್ಕಿದೆ. ಗ್ರಾಮೀಣ ಠಾಣೆ ಪಿಐ ಮಂಜುನಾಥ ಲಿಂಗರೆಡ್ಡಿ ಅವರು ವಿಚಾರಣೆ ನಡೆಸಿದಾಗ ಮಟ್ಕಾ ಬುಕ್ಕಿ ಈಶ್ವರ ನಾಯ್ಕ ಅವರ ಹೆಸರು ಬಹಿರಂಗವಾಗಿದೆ. ಕುಮಟಾ ಕಡ್ಲೆ ಹೊಲನಗದ್ದೆಯ ಗೂಡಂಗಡಿಕಾರ ಮಂಜುನಾಥ ನಾಯ್ಕ ಅವರ ಮೇಲೆ ಪಿಎಸ್‌ಐ ಮಂಜುನಾಥ ಗೌಡರ್ ಅವರು ದಾಳಿ ಮಾಡಿದಾಗ ಅಲ್ಲಿಯೂ ಮಟ್ಕಾ ಆಡಿಸುತ್ತಿರುವುದು ಗಮನಕ್ಕೆ ಬಂದಿದೆ. ಮಂಜುನಾಥ ನಾಯ್ಕ ಅವರಿಗೆ ಹೆರವಟ್ಟಾದ ವಿನೋದ ಭಂಡಾರಿ ಆಮೀಷವೊಡ್ಡಿ ಮಟ್ಕಾ ಆಡಿಸುತ್ತಿರುವುದು ಬೆಳಕಿಗೆ ಬಂದಿದೆ.
ಈ ಎಲ್ಲಾ ಹಿನ್ನಲೆ ಪೊಲೀಸರು ಮಟ್ಕಾ ಆಡಿಸುತ್ತಿದ್ದವರ ಜೊತೆ ಮಟ್ಕಾ ಬುಕ್ಕಿಗಳ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಬುಕ್ಕಿಗಳ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸುವುದರ ಜೊತೆ ಅವರ ಚಲನ-ವಲನಗಳನ್ನು ಗಮನಿಸುತ್ತಿದ್ದಾರೆ.
