ಅಕ್ಷರ ಬಾರದ ಅನಕ್ಷರಸ್ತೆ ಪಾರ್ವತಿ ನಾಯ್ಕ ಅವರು 44 ವರ್ಷಗಳಿಂದ ಜೋಪಾನವಾಗಿರಿಸಿಕೊಂಡಿದ್ದ ಅವರ ವಿವಾಹ ದಾಖಲೆಗಳು ಕುಮಟಾ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿರುವಾಗಲೇ ನಾಪತ್ತೆಯಾಗಿದೆ. ಕೌಟುಂಬಿಕ ವಂಶವೃಕ್ಷ ಕಲಹದ ವಿಚಾರಣೆ ವೇಳೆ ಸಾಕ್ಷಿ ಒದಗಿಸಲು ಸಿದ್ಧವಾಗಿದ್ದ ಆ ದಾಖಲೆಯನ್ನು ವಕೀಲರೊಬ್ಬರು ಅದನ್ನು ಅಪಹರಿಸಿದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ!
ಕುಮಟಾದ ಬೆಟ್ಕುಳಿಯ ಪಾರ್ವತಿ ನಾಯ್ಕ ಅವರು 1981ರಲ್ಲಿ ಮಿರ್ಜಾನಿನ ನಾಗೂರಿನ ಹೊನ್ನಪ್ಪ ನಾಯ್ಕ ಅವರನ್ನು ವರಿಸಿದ್ದರು. ಮದುವೆ ಆದ ಕೆಲ ವರ್ಷದ ತರುವಾಯ ಆ ದಂಪತಿ ನಡುವೆ ಮನಸ್ತಾಪ ಮೂಡಿತು. ಹೀಗಾಗಿ ಪಾರ್ವತಿ ನಾಯ್ಕ ಅವರು ತವರುಮನೆಗೆ ಬಂದು ನೆಲೆಸಿದ್ದರು. ಆ ಅವಧಿಯಲ್ಲಿ ಹೊನ್ನಪ್ಪ ನಾಯ್ಕ ಅವರಿಂದ ವರದಕ್ಷಿಣೆ ಕಿರುಕುಳ ನೀಡಿದ ಆರೋಪವ್ಯಕ್ತವಾಗಿದ್ದು, ಗುರು-ಹಿರಿಯರ ಸಮ್ಮುಖದಲ್ಲಿ ಆ ವಿಷಯ ರಾಜಿಯೂ ನಡೆದಿತ್ತು. ರಾಜಿ ನಂತರ ಪಾರ್ವತಿ ನಾಯ್ಕ ಅವರು ತಮ್ಮ ಪತಿ ಮನೆಗೆ ಹೋದರೂ ಅವರು ಮನೆಯೊಳಗೆ ಸೇರಿಸಿಕೊಂಡಿರಲಿಲ್ಲ. ಹೀಗಾಗಿ ಪಾರ್ವತಿ ನಾಯ್ಕ ಅವರು ಮತ್ತೆ ತವರಿಗೆ ಬಂದಿದ್ದು, ಸಹೋದರರ ಮನೆಯಲ್ಲಿ ತಮ್ಮ ಜೀವನ ಕಳೆಯುತ್ತಿದ್ದರು. ಈ ನಡುವೆ ಹೊನ್ನಪ್ಪ ನಾಯ್ಕ ಅವರು ಮತ್ತೊಂದು ವಿವಾಹ ಆಗಿದ್ದರು.
ವರ್ಷಗಳ ನಂತರ ಪಾರ್ವತಿ ನಾಯ್ಕ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಆ ವೇಳೆ ಊರಿನ ಹಿರಿಯರು ಹೊನ್ನಪ್ಪ ನಾಯ್ಕ ಅವರನ್ನು ಭೇಟಿ ಮಾಡಿದರು. ಪಾರ್ವತಿ ನಾಯ್ಕ ಅವರಿಗೆ ಜೀವನಾಂಶ ನೀಡುವಂತೆ ಒತ್ತಾಯಿಸಿದರು. ಆಗ, ಹೊನ್ನಪ್ಪ ನಾಯ್ಕ ಅವರು ಆಸ್ತಿಯಲ್ಲಿ ಪಾಲು ಕೊಡುವ ಭರವಸೆ ನೀಡಿದ್ದು, ಅದಾದ ನಂತರ ತಮ್ಮ ಮಾತು ಬದಲಿಸಿದರು. ಹೀಗಾಗಿ ಪಾರ್ವತಿ ನಾಯ್ಕ ಅವರು ತಮ್ಮ ಮಗ ಸಂತೋಷ ನಾಯ್ಕ ಅವರ ಮೂಲಕ ಆಸ್ತಿ ಹಕ್ಕಿಗಾಗಿ ದಾವೆ ಹೂಡಿದರು.
2025ರ ಅಗಸ್ಟ 14ರಂದು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಈ ಪ್ರಕರಣದ ವಂಶವೃಕ್ಷ ಕುರಿತಾದ ವಿಚಾರಣೆ ನಡೆಯಿತು. ಪಾರ್ವತಿ ನಾಯ್ಕ ಅವರ ಪರ ವಕೀಲೆ ಶಾಂತಿಕಾ ನಾಯ್ಕ ಅವರು ತಮ್ಮ ಬಳಿಯಿರುವ ದಾಖಲೆಗಳನ್ನು ವಿಚಾರಣೆಗೆ ಹಾಜರುಪಡಿಸಲು ಸಿದ್ಧರಾಗಿದ್ದರು. ಪಾರ್ವತಿ ನಾಯ್ಕ ಹಾಗೂ ಹೊನ್ನಪ್ಪ ನಾಯ್ಕ ಅವರ ವಿವಾಹವಾದ ದಾಖಲೆಗಳನ್ನು ಅವರು ಹಾಜರುಪಡಿಸುವವರಿದ್ದರು. ಆ ದಾಖಲೆಯನ್ನು ವಕೀಲೆ ಶಾಂತಿಕಾ ನಾಯ್ಕ ಅವರು ಕಚೇರಿಯ ಟೇಬಲ್ ಮೇಲಿರಿಸಿದ್ದು, ಅದನ್ನು ಹೊನ್ನಪ್ಪ ನಾಯ್ಕ ಅವರ ಪರ ವಕೀಲ ಶ್ರೀನಾಥ ನಾಯ್ಕ ಅವರು ಗಮನಿಸಿದ್ದರು. ತಮ್ಮ ಕೈ ಚಳಕ ಪ್ರದರ್ಶಿಸಿದ ಶ್ರೀನಾಥ ಜಟ್ಟಿ ನಾಯ್ಕ ಅವರು ನಿಧಾನವಾಗಿ ಆ ದಾಖಲೆಯನ್ನು ಎತ್ತಿಕೊಂಡರು. ಅದಾದ ನಂತರ ಹೊನ್ನಪ್ಪ ನಾಯ್ಕ ಅವರ ಎರಡನೇ ಪತ್ನಿಯ ಮಕ್ಕಳಾದ ಸವಿತಾ ನಾಗೇಶ ನಾಯ್ಕ ಹಾಗೂ ಸರಿತಾ ರಾಮಚಂದ್ರ ನಾಯ್ಕ ಅವರಿಗೆ ಅದನ್ನು ಹಸ್ತಾಂತರಿಸಿದರು. ಹೊನ್ನಪ್ಪ ನಾಯ್ಕ ಅವರು ಅಲ್ಲಿಯೇ ಇದ್ದರು.
ದಾಖಲೆ ಕಾಣೆಯಾಗಿರುವ ಬಗ್ಗೆ ಪಾರ್ವತಿ ನಾಯ್ಕ ಕುಟುಂಬದವರು ಸಾಕಷ್ಟು ತಲೆ ಕೆಡಿಸಿಕೊಂಡರು. ಸಂತೋಷ ನಾಯ್ಕ ಅವರು ಈ ವೇಳೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ಉಪವಿಭಾಗಾಧಿಕಾರಿ ಕಚೇರಿಯ ಸಿಸಿ ಕ್ಯಾಮರಾ ದಾಖಲೆಪಡೆದರು. ಸಿಸಿ ಕ್ಯಾಮರಾದಲ್ಲಿ ದಾಖಲೆ ಕಾಣೆಯಾದ ದೃಶ್ಯಾವಳಿಗಳು ಸೆರೆಯಾಗಿದ್ದು, ವಕೀಲ ಶ್ರೀನಾಥ ನಾಯ್ಕ ಅವರೇ ದಾಖಲೆ ತೆಗೆದು ಬೇರೆಯವರಿಗೆ ನೀಡಿರುವುದು ಸ್ಪಷ್ಠವಾಯಿತು. ಈ ಹಿನ್ನಲೆ ಸಂತೋಷ ನಾಯ್ಕ ಅವರು ದಾಖಲೆ ಕದ್ದವರು ಹಾಗೂ ಕಳ್ಳತನಕ್ಕೆ ಉತ್ತೇಜನ ನೀಡಿದವರ ವಿರುದ್ಧ ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಪೊಲೀಸರಿಗೆ ಸಹ ದೂರು ನೀಡಿದ್ದು, ಕಳ್ಳತನ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ತಮಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.
ದಾಖಲೆ ಕಳ್ಳತನದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..
ವಕೀಲರು ಹಾಗೂ ಹೊನ್ನಪ್ಪ ನಾಯ್ಕ ಕಡೆಯವರ ಹೇಳಿಕೆಯ ನಿರೀಕ್ಷೆಯಲ್ಲಿದ್ದು, ಅವರ ಪ್ರತಿಕ್ರಿಯೆ ದೊರೆತಲ್ಲಿ ಅದೂ ಸಹ ಇಲ್ಲಿ ಪ್ರಸಾರವಾಗಲಿದೆ.
Discussion about this post