ಶಿರಸಿಯ ಸಂಪಿಗಲ್ಲಿಯಲ್ಲಿ ಬೈಕ್ ಕಳ್ಳತನ ನಡೆದಿದೆ. ಹೆಲ್ಮೆಟ್ ಹೊಂದಿದ ವ್ಯಕ್ತಿಯೊಬ್ಬ ಬೈಕ್ ಕದ್ದು ಪರಾರಿಯಾದ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಿಂಪಿಗಲ್ಲಿಯ ಇಂಜಿನಿಯರ್ ಜ್ಞಾನದೀಪ ತಿರುಮಲೆ ಅವರು ತಮ್ಮ ಬೈಕ್ ಕಳೆದುಕೊಂಡಿದ್ದಾರೆ. ಅಗಸ್ಟ 30ರಂದು ಅವರು ತಮ್ಮ ಬೈಕನ್ನು ಸಿಂಪಿಗಲ್ಲಿಯ ಮನೆ ಬಳಿ ನಿಲ್ಲಿಸಿದ್ದರು. ಆ ದಿನ ಅವರು ಬೆಂಗಳೂರಿಗೆ ಹೋಗಿದ್ದು, ಸೆಪ್ಟೆಂಬರ್ 14ರಂದು ಮರಳಿ ಬಂದು ನೋಡಿದಾಗ ಮನೆ ಪಕ್ಕದ ಪ್ರದೇಶದಲ್ಲಿ ಬೈಕ್ ಇರಲಿಲ್ಲ.
ಎಲ್ಲಾ ಕಡೆ ಬೈಕ್ ಹುಡುಕಿದ ಅವರು ಕೊನೆಗೆ ಚಿಕ್ಕಪ್ಪನ ಮನೆಯ ಸಿಸಿ ಕ್ಯಾಮರಾ ಪರಿಶೀಲನೆಗೆ ಮುಂದಾದರು. ಸೆಪ್ಟೆಂಬರ್ 10ರ ರಾತ್ರಿ 11.45ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಬೈಕ್ ಅಪಹರಿಸಿದ್ದು ಸಿಸಿ ಕ್ಯಾಮರಾದಲ್ಲಿ ಕಾಣಿಸಿತು. ಹೆಲ್ಮೆಟ್ ಧರಿಸಿ ಬಂದ ಆಗಂತುಕ ಹ್ಯಾಂಡಲ್ ಲಾಕ್ ಮುರಿದು ಬೈಕನ್ನು ದೂಡಿಕೊಂಡು ಹೋಗಿರುವುದನ್ನು ಜ್ಞಾನದೀಪ ತಿರುಮಲೆ ಅವರು ಗಮನಿಸಿದರು.
ಶಿರಸಿ ನಗರ ಠಾಣೆಗೆ ಬಂದ ಅವರು ತಮ್ಮ ಬಜಾಜ್ ಪಲ್ಸರ್ ಬೈಕ್ ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ಅನಾಮದೇಯ ವ್ಯಕ್ತಿಯನ್ನು ಹುಡುಕಿ ತಮ್ಮ ಬೈಕ್ ಮರಳಿಸುವಂತೆ ಮನವಿ ಮಾಡಿದರು. ಇದೀಗ ಪೊಲೀಸರು ಬೈಕ್ ಕಳ್ಳನ ಹುಡುಕಾಟ ನಡೆಸಿದ್ದಾರೆ.
