ಅಪಾಯಕಾರಿ ಮರಗಳ ಕಟಾವಿಗೆ ಸರ್ಕಾರ ಅನುಮತಿ ನೀಡಿದ್ದು, ಕುಮಟಾದ ಉಪ್ಪಾರಕೇರಿಯಲ್ಲಿ ಮರ ಕಡಿಯಲು ಬಂದವರು ಅಲ್ಲಿನ ಬಸ್ ನಿಲ್ದಾಣವನ್ನು ಉರುಳಿಸಿದ್ದಾರೆ!
ಉಪ್ಪಾರಕೇರಿಯ ರಸ್ತೆ ಅಂಚಿನಲ್ಲಿ ಅನೇಕ ವರ್ಷಗಳಿಂದ ಆಲದ ಮರವಿದ್ದು, ಅದು ದೊಡ್ಡದಾಗಿ ಬೆಳೆದಿತ್ತು. ಹೀಗಾಗಿ ಆಲದ ಮರದ ಟೊಂಗೆಯನ್ನು ಈಚೆಗೆ ಕಟಾವು ಮಾಡಲಾಯಿತು. ಅಪಾಯಕಾರಿಯಾಗಿದ್ದ ಮರದ ಟೊಂಗೆ ಕಟಾವು ವೇಳೆ ಅಲ್ಲಿನ ಬಸ್ ನಿಲ್ದಾಣದ ಮೇಲೆ ಮರ ಬಿದ್ದಿತು. ಪರಿಣಾಮ ಇಡೀ ಬಸ್ ನಿಲ್ದಾಣ ಕುಸಿಯಿತು.
ಮರ ಕಟಾವು ಮಾಡಿದ ಅಂಚಿನ ರಸ್ತೆ ಮೂರೂರು, ಹೊಸಾಡ, ಬುಗ್ರಿಬೈಲ್ ಇನ್ನಿತರ ಊರುಗಳಿಗೆ ತಲುಪುತ್ತದೆ. ಸದ್ಯ ಬಸ್ ನಿಲ್ದಾಣ ಇಲ್ಲದ ಕಾರಣ ಜನ ರಸ್ತೆ ಮೇಲೆ ನಿಲ್ಲುತ್ತಿದ್ದಾರೆ. ಬಸ್ಸು ಬರುವವರೆಗೂ ರಸ್ತೆ ಅಂಚಿನಲ್ಲಿ ನಿಂತು ಕಾಯುತ್ತಿರುತ್ತಾರೆ. ಬಸ್ ನಿಲ್ದಾಣ ಇಲ್ಲದೇ ಜನ ರಸ್ತೆ ಅಂಚಿನಲ್ಲಿ ಕಾಯುತ್ತಿರುವುದರಿಂದ ವೇಗವಾಗಿ ಸಂಚರಿಸುವ ವಾಹನಗಳು ಅಲ್ಲಿ ನಿಲ್ಲುವ ಪ್ರಯಾಣಿಕರಿಗೆ ಡಿಕ್ಕಿ ಹೊಡೆಯುವ ಆತಂಕ ಎದುರಾಗಿದೆ.
`ಗುತ್ತಿಗೆದಾರನ ಬೇಜವಬ್ದಾರಿಯಿಂದ ಬಸ್ ನಿಲ್ದಾಣ ನಾಶವಾಗಿದೆ’ ಎಂಬುದು ಅಧಿಕಾರಿಗಳ ಮಾತು. ಬಸ್ ನಿಲ್ದಾಣ ನಾಶವಾಗಿದ್ದರೂ ಅದನ್ನು ಸರಿಪಡಿಸುವ ಹೊಣೆಯನ್ನು ಗುತ್ತಿಗೆದಾರವಹಿಸಿಕೊಂಡಿಲ್ಲ. `ಕೂಡಲೇ ನೂತನ ಬಸ್ ನಿಲ್ದಾಣ ನಿರ್ಮಿಸಬೇಕು. ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಇದನ್ನು ಗಮನಿಸಬೇಕು’ ಎಂದು ಅಲ್ಲಿಗೆ ಭೇಟಿ ನೀಡಿದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಆಗ್ರಹಿಸಿದರು.
`ಶಿರಸಿ-ಕುಮಟಾ ಹೆದ್ದಾರಿಗೆ ಹೊಂದಿಕೊAಡು ಸಾಕಷ್ಟು ಬಸ್ ನಿಲ್ದಾಣ ಅಸ್ತವ್ಯಸ್ಥವಾಗಿದೆ. ಹೆದ್ದಾರಿ ನಿರ್ಮಾಣ ಕಂಪನಿ ಈ ಬಗ್ಗೆಯೂ ಗಮನಿಸಬೇಕು. ಇಲ್ಲವಾದಲ್ಲಿ ಜನರ ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಎಚ್ಚರಿಸಿದರು.
Discussion about this post