ಶಿರಸಿ ಉಪಅರಣ್ಯ ಸಂರಕ್ಷಣಾಧಿಕಾರಿಯಾಗಿ ಸಂದೀಪ್ ಸೂರ್ಯವಂಶಿ ಅವರು ಆಗಮಿಸಿದ್ದು, ಶನಿವಾರ ನ್ಯಾಯವಾದಿ ರವೀಂದ್ರ ನಾಯ್ಕ ಅವರು ತಮ್ಮ ಅರಣ್ಯ ಅತಿಕ್ರಮಣದಾರರ ತಂಡದ ಜೊತೆ ಅವರನ್ನು ಭೇಟಿಯಾದರು. ಆರಂಭದಲ್ಲಿ ಕೈ ಕುಲುಕಿ, ಪುಷ್ಪಗುಚ್ಚ ನೀಡಿ ಅಧಿಕಾರಿಯನ್ನು ಸ್ವಾಗತಿಸಿದ ಅವರು ಅದಾದ ನಂತರ ಅರಣ್ಯ ಅತಿಕ್ರಮಣದಾರರ ಮೇಲೆ ನಡೆಯುವ ದೌರ್ಜನ್ಯದ ವಿಷಯವಾಗಿ ಕೆಂಡಾಮoಡಲರಾದರು!
`ಉತ್ತರ ಕನ್ನಡ ಜಿಲ್ಲೆ ಅರಣ್ಯವಾಸಿಗಳಿಂದ ಕೂಡಿದೆ. ಇಲ್ಲಿನ ಜನ ಜೀವನಕ್ಕಾಗಿ ಅಲ್ಲಲ್ಲಿ ಅರಣ್ಯ ಅತಿಕ್ರಮಣ ಮಾಡಿದ್ದು, ಅದನ್ನೇ ನೆಪವಾಗಿಸಿಕೊಂಡು ಅರಣ್ಯಾಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಕಾನೂನು ಮೀರಿ ವರ್ತಿಸುತ್ತಿದ್ದಾರೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಆಕ್ರೋಶವ್ಯಕ್ತಪಡಿಸಿದರು. `ಅಧಿಕಾರಿಗಳು ನಿಯಮಾನುಸಾರ ಕೆಲಸ ಮಾಡಬೇಕು. ಅರಣ್ಯವಾಸಿಗಳ ಪರವಾದ ನಿಲುವು ಹೊಂದಿರಬೇಕು’ ಎಂದವರು ಕೂಗಿ ಹೇಳಿದರು.
`ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಸಂವಿಧಾನ ಭದ್ದ ಹಕ್ಕು. ಯಾವ ಕಾರಣಕ್ಕೂ ಅರಣ್ಯವಾಸಿಗಳ ಮೇಲೆ ದೌಜನ್ಯ, ಕಿರುಕುಳ ನಡೆಯಬಾರದು’ ಎಂದು ತಾಕೀತು ಮಾಡಿದರು. ಈ ವೇಳೆ ಹಾಜರಿದ್ದ ಇಬ್ರಾಹೀಂ ಗೌಡಳ್ಳಿ, ಮಂಜುನಾಥ ಮರಾಠಿ, ಚಂದ್ರಹಾಸ ನಾಯ್ಕ ಮಂಕಿ, ಮಾಬ್ಲೇಶ್ವರ ನಾಯ್ಕ, ರಾಘವೇಂದ್ರ ಕವಂಚೂರು, ಗಣಪತಿ ನಾಯ್ಕ, ಅಮೋಜ್ ಮಲ್ಲಾಪುರ, ಎಮ್ ಆರ್ ನಾಯ್ಕ, ರಾಜು ಗೌಡ ಕುಮಟಾ, ಸಂಕೇತ ನಾಯ್ಕ ಹೊನ್ನಾವರ, ರವಿಚಂದ್ರ, ರಮೇಶ್ ನಾಯ್ಕ ಅನಂತವಾಡಿ ಮೊದಲಾದವರು ಅರಣ್ಯಾಧಿಕಾರಿಗಳಿಗೆ ಕಾನೂನು ತಿಳುವಳಿಕೆ ಪತ್ರ ಕೊಟ್ಟರು. ಅರಣ್ಯ ಅಧಿಕಾರಿಯೊಂದಿಗೆ ಸಮಾಲೋಚನೆಯ ಸನ್ನಿವೇಶದಲ್ಲಿ ನೂರ್ ಅಹಮ್ಮದ್ ಕಿರವತ್ತಿ, ಕುಮಾರ ಮಿರಾಶಿ, ಜಯಂತ, ಉಮೇಶ್, ಮಾರುತಿ ನಾಯ್ಕ ಸಿದ್ದಾಪುರ, ತಿಮ್ಮಪ್ಪ ನಾಯ್ಕ ಸಿದ್ದಾಪುರ, ವಾಸು, ವೆಂಕಟೇಶ ನಾಯ್ಕ ಉಂಚಳ್ಳಿ, ಬಸ್ತಾöಂವ್ ಡಿಸೋಜಾ ಅಂಥೋನ್, ನಾಗರಾಜ, ಕ್ಯಾಲಿಸ್ ಫರ್ನಾಂಡಿಸ್, ಭಾಸ್ಕರ್ ಶಿರಳಕೊಪ್ಪ ಮೊದಲಾದವರು ಕಾನೂನು ಅಂಶಗಳ ಸ್ಪಷ್ಟೀಕರಣಕ್ಕೆ ಆಗ್ರಹಿಸಿದರು. ಈ ವೇಳೆ ಮಾತಿನ ಚಕಮಕಿಯೂ ನಡೆಯಿತು.
ಕೊನೆಗೆ `ಅರಣ್ಯ ಹಕ್ಕು ಕಾಯಿದೆಯಂತೆ ಅರಣ್ಯವಾಸಿಗಳ ಸಾಗುವಳಿಗೆ ಅರಣ್ಯ ಇಲಾಖೆ ಬದ್ಧವಾಗಿದೆ. ಆದರೆ, ಹೊಸ ಅತಿಕ್ರಮಣ ಸಹಿಸಲ್ಲ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಹೇಳಿದರು. ಶಿರಸಿ ನಗರ ಪೋಲಿಸ್ ಠಾಣಾಧಿಕಾರಿ ನಾಗಪ್ಪ ಅವರು ಪರಿಸ್ಥಿತಿ ನಿಭಾಯಿಸಿದರು.
Discussion about this post