ಹೊನ್ನಾವರದ ಪ್ರಸಿದ್ಧ ಇಡಗುಂಜಿ ದೇವಾಲಯಕ್ಕೆ ಸೇರಿದ ಅಡಿಕೆ ತೋಟದಲ್ಲಿ ಕಳ್ಳತನ ನಡೆದಿದೆ. ಅಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಯನ್ನು ಕಳ್ಳರು ಅಪಹರಿಸಿದ್ದಾರೆ.
ಇಡಗುಂಜಿ ದೇವಾಲಯಕ್ಕೆ ಹೊಸ್ಕೇರೆಯಲ್ಲಿ 5 ಎಕರೆ ತೋಟವಿದೆ. ಕೊಳೆ ರೋಗ ಬಾರದಂತೆ ತಡೆಯಲು ಜುಲೈ ತಿಂಗಳ ಅವಧಿಯಲ್ಲಿ ಇಲ್ಲಿನ ಅಡಿಕೆ ಫಸಲಿಗೆ ಮದ್ದು ಹೊಡೆಯಲಾಗಿತ್ತು. ಈ ವೇಳೆ ಮರದಿಂದ ಬಿದ್ದ ಅಡಿಕೆಯನ್ನು ಹೆಕ್ಕಿ ಅಲ್ಲಿದ್ದ ತೋಟದ ಮನೆಯಲ್ಲಿ ದಾಸ್ತಾನು ಮಾಡಲಾಗಿತ್ತು.
ಜುಲೈ 28ರಂದು ಇಡಗುಂಜಿ ದೇವಸ್ಥಾನದ ಮಣಗಾರರಾಗಿರುವ ಗುಣವಂತೆ ಹೆಬ್ಬರಹಿತ್ಲದ ಮಣಿಕಂಠ ಗೌಡ ಅವರು ದಾಸ್ತಾನು ಮಾಡಿದ್ದ ಅಡಿಕೆಯನ್ನು ಪರಿಶೀಲಿಸಿದ್ದರು. 5 ಸಾವಿರ ರೂ ಮೌಲ್ಯದ ಅಂದಾಜು 2500 ಅಡಿಕೆಗಳು ಅಲ್ಲಿದ್ದವು. ಸೆಪ್ಟೆಂಬರ್ 11ರಂದು ಮಣಿಕಂಠ ಗೌಡ ಅವರು ತೋಟದ ಮನೆಗೆ ಹೋದಾಗ ಆ ಅಡಿಕೆ ಕಾಣಲಿಲ್ಲ.
ತೋಟದ ಮನೆಯ ಹಿಂದಿನ ಬಾಗಿಲು ಸಹ ಒಡೆದಿತ್ತು. ಕಳ್ಳರು ಬಾಗಿಲು ಒಡೆದು ಒಳಗೆ ಪ್ರವೇಶಿಸಿ ಅಡಿಕೆ ಕದ್ದಿರುವ ಬಗ್ಗೆ ಅವರಿಗೆ ಮನದಟ್ಟಾಯಿತು. ಹೀಗಾಗಿ ದೇವಾಲಯದ ಪರವಾಗಿ ಅವರು ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದರು.
