ಯಲ್ಲಾಪುರದ ಮನೆಯೊಂದರಲ್ಲಿ ಅಕ್ರಮವಾಗಿ ಸಾಗವಾನಿ ದಾಸ್ತಾನು ಮಾಡಿದ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ಬಂದಿದ್ದು, ಬೀಗ ಹಾಕಿದ ಮನೆ ಸುತ್ತ ಅಧಿಕಾರಿಗಳು ರಾತ್ರಿಯಿಡೀ ಕಾವಲು ಕಾದಿದ್ದಾರೆ. ಆದರೆ, ಆ ಪ್ರಮಾಣದ ನಾಟಾ ಅಲ್ಲಿ ಸಿಗದ ಕಾರಣ ಹಾಗೇ ಮರಳಿದ್ದಾರೆ!
ಯಲ್ಲಾಪುರದ ತಳ್ಳಿಗೇರಿಯ ಹಸನ್ ಖಾನ ಎಂಬಾತರ ಮನೆಯಲ್ಲಿ ಅಕ್ರಮ ಸಾಗವಾನಿ ನಾಟಾ ದಾಸ್ತಾನು ಮಾಡಿದ ಬಗ್ಗೆ ಅರಣ್ಯ ಇಲಾಖೆಗೆ ದೂರು ಬಂದಿತ್ತು. ಆ ದೂರಿನ ಬೆನ್ನತ್ತಿ ಹೊರಟ ಅರಣ್ಯಾಧಿಕಾರಿಗಳಿಗೆ ಅಲ್ಲಿ ಮನೆ ಬಳಕೆಗಾಗಿ ತಂದ್ದಿದ್ದ ಬಾಗಿಲ ಚೌಕಟ್ಟುಗಳು ಕಾಣಿಸಿದವು. ಆದರೆ, ಆ ವೇಳೆ ಅಲ್ಲಿ ಮನೆಯವರು ಯಾರು ಇರಲಿಲ್ಲ. ಅಲ್ಲಿದ್ದ ಮನೆಗೆ ಬೀಗ ಹಾಕಿದ್ದು, ಅರಣ್ಯಾಧಿಕಾರಿಗಳು ರಾತ್ರಿಯಿಡೀ ಆ ಮನೆ ಸುತ್ತ ಕಾವಲು ಕಾದರು.
ಮರುದಿನ ಮನೆ ಮಾಲಕರು ಸ್ಥಳಕ್ಕೆ ಬಂದಾಗ ಅರಣ್ಯ ಸಿಬ್ಬಂದಿ ಬಾಗಿಲು ತೆಗೆಸಿದರು. ಮನೆ ಒಳಗೆ ತಪಾಸಣೆ ಮಾಡಿದಾಗ ಅಲ್ಲಿ ಯಾವುದೇ ಬಗೆಯ ಸಾಗವಾನಿ ನಾಟಾ ಸಿಗಲಿಲ್ಲ. ಹಿಂದಿನ ದಿನ ಸಿಕ್ಕ ಬಾಗಿಲು ಚೌಕಟ್ಟುಗಳ ಬಗ್ಗೆ ಅರಣ್ಯ ಅಧಿಕಾರಿಗಳು ವಿಚಾರಣೆ ನಡೆಸಿದರು. ಅದಕ್ಕೆ ಅಗತ್ಯ ಪರವಾನಿಗೆಪಡೆದಿರುವುದಾಗಿ ಮನೆ ಮಾಲಕರು ತಿಳಿಸಿದರು. `ಪರವಾನಿಗೆ ಕಾಣಿಸಿ.. ಇಲ್ಲವಾದಲ್ಲಿ ಪ್ರಕರಣ ಎದುರಿಸಿ’ ಎಂದು ಈ ವೇಳೆ ಅಧಿಕಾರಿಗಳು ಸೂಚಿಸಿದರು.
ಮನೆ ಮಾಲಕರು ಹೊಂದಿದ್ದ ಮೂರು ಚೌಕಟ್ಟು ಹೊಂದಿರುವ ಬಗ್ಗೆ ದಾಖಲೆ ಒದಗಿಸಲು ಸಮಯ ಕೇಳಿದ್ದು, ಸೂಚಿಸಿದ ಸಮಯದ ಒಳಗೆ ದಾಖಲೆ ಒದಗಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
Discussion about this post