ಶಿರಸಿ: `ಅಧಿಕಾರಿಗಳು ವ್ಯಾಯಾಮ, ಕ್ರೀಡೆ, ಯೋಗಗಳ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು\’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕರೆ ನೀಡಿದರು.
ಶನಿವಾರ ಮಾರಿಕಾಂಬಾ ಜಿಲ್ಲಾ ಕ್ರಿಡಾಂಗಣದಲ್ಲಿ ನಡೆದ ಅಧಿಕಾರಿಗಳ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು `ಸರಕಾರದ ಅಗತ್ಯ ಸೌಲಭ್ಯಗಳ ಪೂರೈಕೆ ಹಾಗೂ ಮೂಲಭೂತ ಸಮಸ್ಯೆ ನಿವಾರಣೆಗಾಗಿ ಕಂದಾಯ, ಪೋಲಿಸ್ ಹಾಗೂ ಅರಣ್ಯ ಇಲಾಖೆ ಸೇರಿ ವಿವಿಧ ಇಲಾಖೆ ನೌಕರರು ಶ್ರಮಿಸುತ್ತಿದ್ದಾರೆ. ಜನಸಾಮಾನ್ಯರು ಮತ್ತು ಜನಪ್ರತಿನಿಧಿಗಳ ನಡುವಿನ ಸಂಪರ್ಕ ಕೊಂಡಿಯಾಗಿರುವ ನೌಕರರು ಒತ್ತಡದಿಂದ ಹೊರ ಬರಲು ದಿನನಿತ್ಯ ವ್ಯಾಯಾಮ, ಯೋಗ, ಕ್ರೀಡೆ ಅಗತ್ಯ\’ ಎಂದರು.
`ಕೆಲಸದ ಒತ್ತಡದ ನಡುವೆಯೂ ನೌಕರರು ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು. ತಮ್ಮನ್ನೇ ನಂಬಿಕೊoಡಿರುವ ಕುಟುಂಬ ವರ್ಗಕ್ಕೂ ಸಮಯ ಮೀಸಲಿಡುವ ಅಗತ್ಯವಿದೆ\’ ಎಂದರು.
ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಮಾತನಾಡಿ `ಅತ್ಯಂತ ವಿಶಾಲವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ನೌಕರರಿಗೆ ಪರಸ್ಪರ ಮುಖಾಮುಖಿ ಭೇಟಿಗೆ ಕ್ರೀಡಾಕೂಟ ಸಹಕಾರಿ. ಕ್ರೀಡಾ ಮನೋಭಾವ ಬೆಳಸಿಕೊಳ್ಳುವುದರಿಂದ ಪ್ರತಿಯೊಬ್ಬರಲ್ಲಿ ಉತ್ತಮ ವ್ಯಕ್ತಿತ್ವ ಹಾಗೂ ಆರೋಗ್ಯ ವೃದ್ಧಿಯಾಗಲಿದೆ\’ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಇತರರು ಇದ್ದರು.