ಧಾರಾಕಾರ ಮಳೆಯಲ್ಲಿ ಒಂದು ಕೈಯಲ್ಲಿ ಕೊಡೆ, ಇನ್ನೊಂದು ಕೈಯಲ್ಲಿ ಸಂಕದ ಹಿಡಿಕೆ ಹಿಡಿದು ಸರ್ಕಸ್ಸು ಮಾಡುತ್ತ ಶಾಲೆಗೆ ಬರುವ ಮಕ್ಕಳ ಅಳಲು ಆಲಿಸಿದವರಿಲ್ಲ. ಕಾರಣ ಆ ಮಕ್ಕಳಿಗೆ ಮತದಾನದ ಹಕ್ಕಿಲ್ಲ. ಊರಿನವರ ಧ್ವನಿ ಆಳುವವರಿಗೆ ಕೇಳುತ್ತಿಲ್ಲ!
ಯಲ್ಲಾಪುರ: ಹಿರಿಯಾಳ ಗ್ರಾಮದ ಬಾಳೆಕೊಡ್ಲುವಿನ ಮಕ್ಕಳು ಶಾಲೆಗೆ ಬರಬೇಕು ಎಂದರೆ ಹರಸಾಹಸ ಮಾಡಬೇಕು. ಮಾರ್ಗದ ನಡುವೆ ಇರುವ ಅಪಾಯಕಾರಿ ಕಾಲು ಸಂಕದ ಕಾರಣ ಶಾಲೆಗೆ ಹೋದ ಮಕ್ಕಳು ಮನೆಗೆ ಮರಳುವವರೆಗೆ ಪಾಲಕರಿಗೆ ನೆಮ್ಮದಿಯಿಲ್ಲ!
ಹಿರಿಯಾಳ ಗ್ರಾಮಕ್ಕೆ ಅಡ್ಡಲಾಗಿ ಅಂದಾಜು 10 ಅಡಿ ಅಗಲದಲ್ಲಿ ಗುಮ್ಮಾನಿಮನೆ ಹಳ್ಳ ಹರಿಯುತ್ತದೆ. ಹಿರಿಯಾಳ ಗ್ರಾಮದ 9 ಮಕ್ಕಳು ನಿತ್ಯ ಈ ಹಳ್ಳ ದಾಟಿ ಶಾಲೆಗೆ ಬರುತ್ತಾರೆ. 4 ಮಕ್ಕಳು ಕಟ್ಟಿಗೆ ಪ್ರಾಥಮಿಕ ಶಾಲೆ ಹಾಗೂ 5 ವಿದ್ಯಾರ್ಥಿಗಳು ಬಿಸಗೋಡಿನ ಹೈಸ್ಕೂಲಿಗೆ ಹೋಗುತ್ತಾರೆ. ಹಿರಿಯಾಳ ಗ್ರಾಮದಲ್ಲಿ ಅಂದಾಜು 400 ಜನ ವಾಸವಾಗಿದ್ದು, ಈ ಭಾಗದವರ ಅನುಕೂಲಕ್ಕೆ ಪುಟ್ಟ ಸೇತುವೆ ನಿರ್ಮಿಸಬೇಕು ಎಂಬುದು ದಶಕಗಳ ಹಿಂದಿನ ಬೇಡಿಕೆ. ಆದರೆ, ಅದು ಈವರೆಗೂ ಈಡೇರಿಲ್ಲ.
ಹಿರಿಯಾಳ ಗ್ರಾಮದ ಮಕ್ಕಳು ಈ ಸಂಕ ಬಿಟ್ಟು ಇನ್ನೊಂದು ದಾರಿ ಮೂಲಕವೂ ಶಾಲೆಗೆ ಬರಲು ಸಾಧ್ಯ. ಆದರೆ, ಆ ರಸ್ತೆ ಕಾಡಿನ ಕಾಲುದಾರಿ. ಕಾಲುದಾರಿ ಮುಗಿದ ನಂತರವೂ ಕಚ್ಚಾ ರಸ್ತೆಯಲ್ಲಿ ಸಂಚರಿಸುವುದು ಅನಿವಾರ್ಯ. ವನ್ಯಜೀವಿಗಳ ಹಾವಳಿಯಿಂದ ಕೂಡಿರುವ ಕಾಡಿನ ಕಾಲುದಾರಿಯಲ್ಲಿ ಸಣ್ಣ ಮಕ್ಕಳನ್ನು ಕಳುಹಿಸುವುದಕ್ಕಿಂತ ಅಪಾಯಕಾರಿಯಾದ ಕಾಲು ಸಂಕ ದಾಟಿಸುವುದೇ ಉತ್ತಮ ಎಂಬುದು ಆ ಭಾಗದ ಪಾಲಕರ ಅಭಿಪ್ರಾಯ.
ಇನ್ನೂ ಪ್ರತಿ ವರ್ಷ ಕಾಲು ಸಂಕ ಮಳೆಗೆ ಕೊಚ್ಚಿ ಹೋಗುವುದು ಸಾಮಾನ್ಯ. ಆಗ ಆ ಭಾಗದ ಕುಣುಬಿ ಮನೆಯವರು ಮತ್ತೆ ಸಂಕ ನಿರ್ಮಿಸುತ್ತಾರೆ. ಅಡಿಕೆ ಮರಗಳನ್ನು ಕಡಿದು ಅದಕ್ಕೆ ಕಾಡು ಬಳ್ಳಿಗಳನ್ನು ಕಟ್ಟಿ ದಾರಿ ಮಾಡಿಕೊಳ್ಳುತ್ತಾರೆ. `ಮಕ್ಕಳ ಸಮಸ್ಯೆ ಅರಿತಾದರೂ ಹಳ್ಳಕ್ಕೆ ಅಡ್ಡಲಾಗಿ ಪುಟ್ಟ ಸೇತುವೆ ನಿರ್ಮಿಸಬೇಕು\’ ಎಂಬುದು ಅಲ್ಲಿನ ಮಹೇಶ ಕುಣಬಿ ಅವರ ಒತ್ತಾಯ.