ಯಲ್ಲಾಪುರ: ಮದನೂರು ತಾವರೆಕಟ್ಟಾದ ಪಾವ್ಲು ಪ್ರಾನ್ಸಿಸ್ ಸಿದ್ದಿ (48) ಕೊಲೆಯಾಗಿದ್ದು, ಆತನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದ ಸುರೇಶ್ ಪವಾರ್ ಮೇಲೆ ಅನುಮಾನ ವ್ಯಕ್ತವಾಗಿದೆ.
ಮದನೂರು ಬಳಿಯ ಬಸಳೆಬೈಲ್\’ನ ಸುರೇಶ ಲಕ್ಷö್ಮಣ ಪವಾರ್ ಅಂಗವಿಕಲರಾಗಿದ್ದು, ತನ್ನ ಮೂರು ಚಕ್ರದ ವಾಹನದಲ್ಲಿ ಸೆ 28ರಂದು ಪಾವ್ಲು ಅವರನ್ನು ಕೂರಿಸಿಕೊಂಡು ಹೋಗಿದ್ದರು. ಆದರೆ, ಮರಳಿ ಮನೆಗೆ ಬಿಟ್ಟಿರಲಿಲ್ಲ. ಈ ಬಗ್ಗೆ ಪಾವ್ಲು ಪತ್ನಿ ಮಂಗಲಾ ಸಿದ್ದಿ ವಿಚಾರಿಸಿದಾಗ `ಅದೇ ದಿನ ಸಂಜೆ ಕಳಸೂರು ಕ್ರಾಸಿನಲ್ಲಿ ಪಾವ್ಲುವನ್ನು ಬಿಟ್ಟಿದ್ದೇನೆ\’ ಎಂದು ಹೇಳಿದ್ದರು. ಮರುದಿನ ಬೆಳಗ್ಗೆ ಸಹ ಪಾವ್ಲು ಮನೆಗೆ ಬಾರದ ಕಾರಣ ಮಂಗಲಾ ಸಿದ್ದಿ ಮತ್ತೆ ಸುರೇಶರ ಮನೆಗೆ ಹೋಗಿ ವಿಚಾರಿಸಿದ್ದರು.
ಆ ವೇಳೆ ಸಿಟ್ಟಾದ ಸುರೇಶ್ `ಇನ್ನೊಮ್ಮೆ ನಿನ್ನ ಪತಿಯ ಬಗ್ಗೆ ನನಗೆ ಕೇಳಬೇಡ\’ ಎಂದು ಬೈದಿದ್ದು, ಜೊತೆಗೆ ಕೆಟ್ಟದಾಗಿ ನಿಂದಿಸಿದ್ದರು. ಇದಾದ ನಂತರ ಸೆ 30ರಂದು ಮದನೂರಿನ ಯಳ್ಳಂಬಿ ಹಳ್ಳದಲ್ಲಿ ಪಾವ್ಲು ಸಿದ್ದಿಯ ಶವ ಪತ್ತೆಯಾಗಿದೆ. ಸುರೇಶ್ ಪಾವರ್ ಬಗ್ಗೆ ದೂರಿರುವ ಮಂಗಲಾ ಸಿದ್ಧಿ `ಆತನೇ ತನ್ನ ಪತಿಯನ್ನು ಕೊಂದು ಹಳ್ಳಕ್ಕೆ ಎಸೆದಿದ್ದಾನೆ\’ ಎಂದು ಪೊಲೀಸ್ ದೂರು ನೀಡಿದ್ದಾರೆ.