ಶಿರಸಿ: ಸಿದ್ದಾಪುರದ ನಾದಾನುಸಂಧಾನ ಅವರಿಂದ ಅಕ್ಟೊಬರ್ 19ರಂದು ನಾದ – ನೃತ್ಯೋಪಾಸನಂ ಹಾಗೂ ಅಕ್ಟೊಬರ್ 20 ರಂದು ನಾದೋಪಾಸನಂ ಸಂಗೀತ, ನಾಟ್ಯ ಕಾರ್ಯಕ್ರಮ ನಗರದ ನೆಮ್ಮದಿ ಕುಟೀರದಲ್ಲಿ ನಡೆಯಲಿದೆ.
ಟ್ರಸ್ಟಿನ ಅಧ್ಯಕ್ಷ ಪ್ರವೀಣ ಭಟ್ ಹಾಗೂ ಕಾರ್ಯದರ್ಶಿ ಮೇಧಾ ಭಟ್ ಈ ಬಗ್ಗೆ ಮಾಹಿತಿ ನೀಡಿದ್ದು `ದೇಶದ ನಾನಾ ಭಾಗಗಳ ಕಲಾವಿದರ ಸಮ್ಮಿಲನದೊಂದಿಗೆ ಎರಡು ದಿನಗಳ ಸಂಗೀತ ಕಾರ್ಯಕ್ರಮ ನಡೆಯಲಿದೆ\’ ಎಂದರು. `19ರಂದು ಸಂಜೆ 4.30ಕ್ಕೆ ನಾದ – ನೃತ್ಯೋಪಾಸನಂ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 6 ಗಂಟೆಯಿAದ ವಿ.ಆನೂರು ಅನಂತಕೃಷ್ಣ ಶರ್ಮ ನಿರ್ದೇಶನದಲ್ಲಿ ಲಯ – ಲಾವಣ್ಯ ಕಾರ್ಯಕ್ರಮ ನಡೆಯಲಿದೆ\’ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮಕ್ಕಳ ಸಾಧನೆ
ಶಿರಸಿ: ಮಾರಿಕಾಂಬಾ ಪ್ರೌಢಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಯೋಗಾಸನ ಹಾಗೂ ಶೆಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾರೆ.
ಶಿಕ್ಷಣ ಇಲಾಖೆ ಈ ಸ್ಪರ್ಧೆ ನಡೆಸಿತ್ತು. ದಿಗಂತ್ ಹೆಗಡೆ, ಅಥರ್ವ ನಾಯಕ್, ಪರಾಶರ್ ನಾಯ್ಕ, ಧೀರಜ್ ನಾಯ್ಕ್, ನಿಶಾಂತ್ ನಾಯ್ಕ ಶಟ್ಲ ವಿಭಾಗದಲ್ಲಿ ಹಾಗೂ ಪ್ರಸನ್ನ ಬೋಚಳ್ಳಿ, ಮಿಲನ್ ಪ್ರೇಮಾನಂದ ನಾಯ್ಕ ಯೋಗಾಸನದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ
ಹೊನ್ನಾವರ: `ಉತ್ತಮ ಗುಣಮಟ್ಟದ ಆಹಾರ ಸೇವಿಸಿ ನಾವು ಆರೋಗ್ಯವಾಗಿದ್ದರೆ, ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲಿದೆ\’ ಎಂದು ಪ.ಪಂ. ಮುಖ್ಯಾಧಿಕಾರಿ ಏಸು ಬೆಂಗಳೂರು ಅಭಿಪ್ರಾಯಪಟ್ಟರು.
ಪಟ್ಟಣದ ಸಿಡಿಪಿಓ ಕಛೇರಿಯಲ್ಲಿ ನಡೆದ ಪೋಷಣಾ ಮಾಸಾಚರಣೆ ಸಮಾರೋಪದಲ್ಲಿ ಮಾತನಾಡಿದ ಅವರು `ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯಾಗಿ ಎರಡು ಯೋಜನೆ ಜಾರಿಗೆ ಬಂದಿದ್ದು, ಆರೋಗ್ಯ ವೃದ್ಧಿಯ ಜೊತೆ ರಕ್ಷಣೆಯ ಮೂಲಕ ಸಾಧನೆ ಮಾಡಲು ಪ್ರೇರೆಪಿಸಲಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವ ಪೌಷ್ಟಿಕಾಂಶದ ಆಹಾರ ಸೇವಿಸಬೇಕು. ಮಕ್ಕಳು ಹಾಗೂ ಮಹಿಳೆಯರ ಆರೋಗ್ಯ ವೃದ್ಧಿಸಲು ಅಂಗನವಾಡಿ ಕಾರ್ಯಕರ್ತೆಯರ ಶ್ರಮವು ಬಹುಮುಖ್ಯವಾಗಿದೆ\’ ಎಂದರು.
ಶಾಸಕರನ್ನು ಹೊಗಳಿದ ಹೋರಾಟಗಾರ
ಅಂಕೋಲಾ: `ಶಿರೂರು ಗುಡ್ಡ ಕುಸಿತ ದುರಂತಕ್ಕೆ ಸಂಬoಧಿಸಿ ಶಾಸಕ ಸತೀಸ್ ಸೈಲ್ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ\’ ಎಂದು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದ್ದಾರೆ. `ಇನ್ನಿತರರಿಗಾಗಿ ಶೋಧ ಕಾರ್ಯ ಮುಂದುವರೆಯಬೇಕು\’ ಎಂದು ಸಹ ಅವರು ಆಗ್ರಹಿಸಿದ್ದಾರೆ.
`ಅವೈಜ್ಞಾನಿಕ ಕಾಮಗಾರಿಯಿಂದ ಉಂಟಾದ ದುರಂತ ದುರಾದೃಷ್ಟಕರ. ಜನಪ್ರತಿನಿಧಿಯಾಗಿ ವಯಕ್ತಿಕ ಮತ್ತು ಕ್ಷೇತ್ರದ ಹಿತಾಶಕ್ತಿಯಿಂದ ಸತೀಶ್ ಸೈಲ್ ಕೆಲಸ ಮಾಡಿದ್ದಾರೆ\’ ಎಂದವರು ಹೇಳಿದ್ದಾರೆ. `ದುರಂತದಲ್ಲಿ ಉಂಟಾದ ಚರ ಮತ್ತು ಸ್ಥಿರ ಆಸ್ತಿ ನಷ್ಟಕ್ಕೆ ಹೆಚ್ಚಿನ ಪರಿಹಾರ ನೀಡಬೇಕು. ದುರಂತ ಮರುಕಳಿಸಿದಂತೆ ಜಿಲ್ಲಾಡಳಿತವು ಮಾಸ್ಟರ್ ಯೋಜನೆ ನಿರೂಪಿಸಬೇಕು\’ ಎಂದವರು ಹೇಳಿದ್ದಾರೆ.
ಶಿಷ್ಯರಿಗೆ ಸಂಗೀತ ಉಳಿಸುವ ಹೊಣೆ
ಶಿರಸಿ: `ಸಂಗೀತ ಪರಂಪರೆಯನ್ನು ಶಿಷ್ಯರು ಮುಂದುವರಿಸಬೇಕು. ಆಗ ಮಾತ್ರ ಕಲೆಯ ಹರಿವು, ಉಳಿವು ಸಾಧ್ಯ ಎಂದು\’ ಹಿರಿಯ ಪತ್ರಕರ್ತ ರಾಜೀವ ಅಜ್ಜಿಬಳ ಹೇಳಿದರು.
ಅವರು ನಗರದ ಸಾಮ್ರಾಟ್ ವಿನಾಯಕ ಸಭಾಂಗಣದಲ್ಲಿ ನಿನಾದ ಸಂಗೀತ ಸಭಾದಿಂದ ಆಯೋಜನೆಗೊಂಡಿದ್ದ ಗುರು ಪೂರ್ಣಿಮಾ, ಸಮ್ಮಾನ, ಸಂಗೀತ ಕಾರ್ಯಕ್ರಮದಲ್ಲಿ ಉಡುಪಿಯ ಪ್ರಸಿದ್ಧ ಗಾಯಕ ಪಂಡಿತ್ ಎಂ.ಟಿ.ಭಾಗವತ್ ಅವರನ್ನು ಗೌರವಿಸಿ ಮಾತನಾಡಿದರು.
`ಯಾವುದೇ ಲಲಿತ ಕಲೆಗಳ ಕಲಿಕೆಯಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು. ಪ್ರದರ್ಶನಕ್ಕೆ ಸೀಮಿತಗೊಳ್ಳದೇ ನಿರಂತರ ಸಾಧನೆ ಮಾಡಿದರೆ ಒಂದಿಲ್ಲೊAದು ಕಲಾ ಕ್ಷೇತ್ರದ ನಕ್ಷತ್ರಗಳಾಗಲು ಸಾಧ್ಯವಿದೆ\’ ಎಂದರು.
ಪAಡತ್ ಎಂ.ಪಿ.ಹೆಗಡೆ ಪಡಿಗೇರಿ ಮಾತನಾಡಿ `ಸಂಗೀತ ಸಭಾವು ನಿರಂತವರವಾಗಿ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಕಲೆಯ ಜೊತೆ, ಶಿಷ್ಯರನ್ನೂ ಬೆಳೆಸುವ ಮೂಲಕ ಈ ಪರಂಪರೆ ಮುಂದುವರಿಸುತ್ತಿದೆ\’ ಎಂದರು. ಸಮ್ಮಾನ ಪಡೆದ ಪಂಡಿತ್ ಎಂ.ಟಿ.ಭಾಗವತ್, ವಿದ್ಯಾರ್ಥಿಗಳ ಗಾಯನ, ವಾದನ ಪ್ರಸ್ತುತಿ ಕಲಿಸುವ ಗುರುವಿನ ಆಸಕ್ತಿಯ ದ್ಯೋತಕ. ನಿನಾದ ಸಂಗೀತ ಸಭಾದ ಗುರು ವೃಂದಕ್ಕೆ ವಿಶೇಷ ಅಭಿನಂದನೆ\’ ಎಂದರು.
ವೇದಿಕೆಯಲ್ಲಿ ಪಂಡಿತ್ ಮೋಹನ ಹೆಗಡೆ ಹುಣಸೆಕೊಪ್ಪ, ಪ್ರಾಚರ್ಯ ಶ್ರೀಪಾದ ಹೆಗಡೆ ಸೋಮನಮನೆ, ಗುರು, ವಿದೂಷಿ ಬಕುಲಾ ಹೆಗಡೆ ಇತರರು ಇದ್ದರು. ಮುಂಜಾನೆಯಿoದ ಇಳಿಹೊತ್ತಿನ ತನಕ ಕಲಾ ಶಾಲೆಯ ಮಕ್ಕಳಿಂದ ಶಾಸ್ತ್ರೀಯ ಸಂಗೀತ ಪ್ರಸ್ತುತಿಗಳು ಗಮನ ಸೆಳೆದವು. ಬಳಿಕ ಎಂ.ಟಿ.ಭಾಗವತ್, ಶ್ರೀಪಾದ ಹೆಗಡೆ, ಬಕುಲಾ ಹೆಗಡೆ ಅವರು ಹಾಡಿದರು. ತಬಲಾದಲ್ಲಿ ಪಂ.ಮೋಹನ್ ಹೆಗಡೆ, ಅಕ್ಷಯ ಭಟ್ಟ ಅಂಸಳ್ಳಿ, ವಿಜಯೇಂದ್ರ ಹೆಗಡೆ ಅಜ್ಜಿಬಳ, ಭಾಸ್ಕರ ಹೆಗಡೆ ಮುತ್ತಿಗೆ, ಹಾರ್ಮೋನಿಯಂದಲ್ಲಿ ಭರತ್ ಹೆಗಡೆ ಹೆಬ್ಬಲಸು ಸಹಕಾರ ನೀಡಿದರು. ಇದೇ ವೇಳೆ ಪಂಡಿತ್ ಶ್ರೀಪಾದ ಹೆಗಡೆ ಸೋಮನಮನೆ ಹಾಗೂ ಬಕುಲಾ ಹೆಗಡೆ ಅವರನ್ನು ಶಿಷ್ಯರು ಗುರು ನಮನ ಸಲ್ಲಿಸಿ ಅಭಿನಂದಿಸಿದರು.
ಸರ್ಕಾರಿ ವೆಚ್ಚದಲ್ಲಿ ಐಲ್ಯಾಂಡ್ ಅಭಿವೃದ್ಧಿ
ಕಾರವಾರ: `ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲವಾದ ಅವಕಾಶಗಳಿದ್ದು ಪಶ್ಚಿಮ ಘಟ್ಟ, ಅರಣ್ಯ ಹಾಗೂ ನದಿ ಮತ್ತು ಸಮುದ್ರಗಳ ಸಮ್ಮಿಲನವಾಗಿರುವ ಜಿಲ್ಲೆಯಲ್ಲಿ ಸಿ.ಆರ್. ಝಡ್ ಹಾಗೂ ಅರಣ್ಯ ಇಲಾಖೆಯ ಕಾನೂನುಗಳ ಉಲ್ಲಂಘನೆ ಆಗದಂತೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು\’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳು ಎಸ್ ವೈದ್ಯ ಹೇಳಿದರು.
ಅವರು ಸೋಮವಾರ ಕಾರವಾರದ ಅಜ್ವಿ ಓಷನ್ ಸಭಾಂಗಣದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
`ಜಿಲ್ಲೆಯಲ್ಲಿ ಬೀಚ್ ಟೂರಿಸಮ್, ಟೆಂಪಲ್ ಟೂರಿಸಮ್, ನದಿಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಅವಕಾಶಗಳಿದ್ದು ಈ ಬಗ್ಗೆ ಈಗಾಗಲೇ ಎಲ್ಲಾ ಇಲಾಖೆಗಳ ನೆರವು ಪಡೆಯಲು ಯೋಜನೆ ರೂಪಿಸಲಾಗುತ್ತಿದೆ\’ ಎಂದರು.
`ಎಲ್ಲಾ ಜಿಲ್ಲೆಗಳಲ್ಲಿ ಪಂಚತಾರಾ ಹೋಟೆಲ್\’ಗಳನ್ನು ಸರ್ಕಾರದ ವತಿಯಿಂದ ಅಥವಾ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಚಿಂತನೆ ನಡೆದಿದ್ದು, ಜಿಲ್ಲೆಗೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಮಂಗಳೂರಿನಲ್ಲಿ 1500 ಕೋಟಿ ರೂ ವೆಚ್ಚದಲ್ಲಿ ಪೋರ್ಟ್ ನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಂಕೋಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವು ಮತ್ತಷ್ಟು ಬೆಳವಣಿಗೆಯಾಗಲಿದ್ದು, ಮಂಗಳೂರು ನಿಂದ ಕಾರವಾರದವರೆಗಿನ 13 ಐಲ್ಯಾಂಡ್\’ಗಳನ್ನು ಸರ್ಕಾರದಿಂದ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ\’ ಎಂದರು.
ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಏಜೆನ್ಸಿ ಲಿಮಿಟೆಡ್ ಅಧ್ಯಕ್ಷ ಸತೀಶ್ ಕೆ. ಸೈಲ್ ಮಾತನಾಡಿ `ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಅನೇಕ ತೊಂದರೆಗಳಿವೆ. ತಿಳಮಾತಿ ಬೀಚ್ ಅಭಿದ್ಧಿಯಾಗಿಲ್ಲ. ಕಾಳಿ ನದಿ ಸಂಗಮದಲ್ಲಿ ಅಭಿವೃದ್ಧಿಗೆ ಸಿಆರ್ ಜಡ್ ತೊಡಕಾಗಿದೆ. ಜಿಲ್ಲೆಯಲ್ಲಿ ಹಲವಾರು ನದಿಗಳ ಸಂಗಮ ಪ್ರದೇಶ ಇದ್ದು ಅವುಗಳ ಅಭಿವೃದ್ಧಿಯಾಗಬೇಕಿದೆ\’ ಎಂದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಯಂತ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ, ಜಿ.ಪಂ. ಸಿಇಒ ಈಶ್ವರ ಕುಮಾರ್ ಕಾಂದು, ಚಿತ್ರಕಲಾ ಕಲಾವಿದ ರಾಘವೇಂದ್ರ ಆಮಿನ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಇದ್ದರು.
ಅ.1ರಂದು ಅರಣ್ಯ ಅತಿಕ್ರಮಣ ತುರ್ತು ಸಭೆ
ಶಿರಸಿ: ರಾಜ್ಯ ಸರ್ಕಾರವು ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ತೀರ್ಮಾನಿಸುವ ಹಿನ್ನಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಗ್ರೀನ್ ಕಾರ್ಡ ಹೊಂದಿರುವ ಪ್ರಮುಖರ ತುರ್ತು ಸಭೆ ಅ.೧ ಮಂಗಳವಾರ ಮುಂಜಾನೆ 10 ಗಂಟೆಗೆ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಕರೆಯಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸುವ ನಿರ್ಣಯ ತೆಗೆದುಕೊಳ್ಳಲು ಹೋರಾಟದ ವೇದಿಕೆ ತೆಗೆದುಕೊಳ್ಳುವ ನಿರ್ಣಯ ಕುರಿತು ಚರ್ಚಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.