ಕಾರವಾರ: 1934ರ ಫೆ 27ರಂದು ಗಾಂಧೀಜಿ ವಾಸವಾಗಿದ್ದ ಮನೆಗೆ ಅಕ್ಟೊಬರ್ 2ರಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹಾಗೂ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಭೇಟಿ ನೀಡಿದ್ದು, ಆ ದಿನ ಗಾಂಧೀಜಿ ಬಳಕೆ ಮಾಡಿದ್ದ ವಸ್ತುಗಳನ್ನು ಸ್ಪರ್ಶಿಸಿ ಪುಳಕಿತಗೊಂಡರು. ಗಾಂಧೀಜಿ ಅವರು ಭಾಷಣ ಮಾಡಿದ ಸ್ಥಳ, ಅವರು ತಂಗಿದ್ದ ಕೋಣೆ, ಗಾಂಧೀಜಿ ಅವರಿಗೆ ಉಡುಗರೆಯಾಗಿ ದೊರೆತಿದ್ದ ವಸ್ತುಗಳನ್ನು ನೋಡಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಳದಿಪುರ ಮನೆ ಹಾಗೂ ಗಾಂಧೀಜಿ ನಂಟಿನ ಕುರಿತಾಗಿ ಜಿಲ್ಲಾಡಳಿತದಿಂದ ಸಾಕ್ಷಿಚಿತ್ರ ನಿರ್ಮಿಸುವುದಾಗಿ ಹೇಳಿದರು.
ವಾಮಾನಶ್ರಮ ರಸ್ತೆಯಲ್ಲಿರುವ ಹಳದಿಪುರ ಅವರ ಮನೆಯಲ್ಲಿ ಗಾಂಧೀಜಿ ತಂಗಿದ್ದರು. ಮರುದಿನ ಮುಂಜಾನೆ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಇದಕ್ಕೆ ಹಳದಿಪುರ ಅವರ ಮನೆಯಲ್ಲಿ ಇಂದಿಗೂ ಹಲವು ಸಾಕ್ಷಿಗಳಿದ್ದು ಅವೆಲ್ಲವನ್ನು ಜಿಲ್ಲಾಧಿಕಾರಿ ವೀಕ್ಷಣೆ ಮಾಡಿದರು.
ಈ ವೇಳೆ ಹಳದಿಪುರ ಅವರ ಕುಟುಂಬದವರು ಸಂಗ್ರಹಿಸಿಟ್ಟಿರುವ ಪುರಾತನ ವಸ್ತುಗಳ ಬಗ್ಗೆ ಮಾಹಿತಿ ಪಡೆದರು. ಆ ಅವಧಿಯಲ್ಲಿ ತೆಗೆಯಲಾಗಿದ್ದ ಛಾಯಾಚಿತ್ರಗಳನ್ನು ನೋಡಿದ ಅವರು ಈ ಎಲ್ಲಾ ದಾಖಲೆಗಳನ್ನು ಮುಂದಿನ ತಲೆಮಾರಿನವರಿಗೆ ಹಾಗೂ ಅಧ್ಯಯನಕಾರರಿಗೆ ತಿಳಿಸುವುದಕ್ಕಾಗಿ ಸಾಕ್ಷö್ಯಚಿತ್ರ ನಿರ್ಮಿಸುವುದು ಅಗತ್ಯ ಎಂದರು.
ಗ್ರಾಮಾಫೋನ್ ಸರಿಪಡಿಸುವ ಎಸ್ಪಿ
ಪುರಾತನ ಮನೆಯಲ್ಲಿದ್ದ ಗ್ರಾಮಾಫೋನ್ ಹಾಗೂ ಇನ್ನಿತರ ಎಲೆಕ್ಟಾನಿಕ್ ವಸ್ತುಗಳು ಹಾಳಾಗಿದ್ದವು. ಆ ಬಗ್ಗೆ ವಿಚಾರಿಸಿದ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ `ಹಾಳಾದ ವಸ್ತುಗಳನ್ನು ಸ್ವಂತ ವೆಚ್ಚದಲ್ಲಿ ದುರಸ್ಥಿ ಮಾಡಿಕೊಡುವೆ\’ ಎಂದು ಘೋಷಿಸಿದರು.
ಇದನ್ನೂ ಓದಿ: ಹಳದಿಪುರ ಮನೆಯಲ್ಲಿ ಮಹಾತ್ಮನ ಹೆಜ್ಜೆ ಗುರುತು..
ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಪೌರಾಯುಕ್ತ ಜಗದೀಶ್ ಹುಲಗೆಜ್ಜಿ, ಹಳದಿಪುರ ಕುಟುಂಬದ ಸದಸ್ಯರು ಇದ್ದರು.