ಕಾರವಾರ: ನಗೆ ಶಾಲೆ ಮಕ್ಕಳು ಬಗೆ ಬಗೆಯ ಖಾದ್ಯ ತಯಾರಿಸಿದ್ದು, ಶಾಲೆಗೆ ಆಗಮಿಸಿದ ಗಣ್ಯರು ಮಕ್ಕಳ ಅಡುಗೆಗೆ ಮನಸೋತರು.
ಪೋಷಣ ಅಭಿಯಾನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಕ್ಷಿತಾ ಗೌಡ ಕೊಟ್ಟೆ ರೊಟ್ಟಿ ಜೊತೆ ಚಟ್ನಿಯನ್ನು ಉಣಬಡಿಸಿದರು. ಮೋನಿಕಾ ಚಪಾತಿ ಇಡ್ಲಿಯನ್ನು ಮಾಡಿ ತಂದಿದ್ದರು. ಶಾಂತಾ ನೌರಿ ಹಾಗೂ ಪ್ರಭಾವತಿ ಗ್ರಾಮೀಣ ಸೊಬಗಿನ ಅಕ್ಕಿ ಲಾಡು ತಂದಿದ್ದರೆ, ಪಾವನಿ ಪಾಯಸದ ತಿಂಡಿ ಬಡಿಸಿದರು. ಪ್ರೀತಮ್ ದೋಸೆ ಚಟ್ನಿ, ಸುಮಂತ ಚಪಾತಿ ಬಾಜಿ, ಶರತ ಪುರಿ-ಬಾಜಿ, ಭಾಗ್ಯಶ್ರೀ ಪಡ್ಡು, ವಿಘ್ನೇಶ್ ಬನ್ಸ-ಬಾಜಿ ಮಾಡಿಕೊಂಡು ಪೌಷ್ಠಿಕ ಅಂಶಗಳ ಬಗ್ಗೆ ಅರಿವು ಮೂಡಿಸಿದರು.
ವಿವಿಧ ಪೌಷ್ಠಿಕಾಂಶ ಇರುವ ತರಕಾರಿ-ಹಣ್ಣುಗಳ ಜೊತೆ ಮೊಟ್ಟೆ, ಬೇಳೆ, ಅಕ್ಕಿ-ಕಾಳುಗಳಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಯಿತು. ಜೇನುತುಪ್ಪ, ಗ್ರಾಮೀಣ ಬೆಲ್ಲ, ಬದಾಮ, ಪಿಸ್ತಾ, ಅಕ್ರೂಡ್, ಕಡ್ಲೆಗಳ ಬಳಕೆ ಹಾಗೂ ಉಪಯೋಗದ ಬಗ್ಗೆ ಶಿಕ್ಷಕರು ಮಕ್ಕಳಿಗೆ ಅರಿವು ಮೂಡಿಸಿದರು. ಸಾಯಿ ಸತ್ವ ನಿಕೇತನ ಸಂಸ್ಥೆಯ ಅಧ್ಯಕ್ಷ ಗಿರೀಶ ಅವರು ಮಕ್ಕಳ ಅಡುಗೆಗೆ ಮನಸೋತರು. ಸಾಯಿ ಸತ್ವ ನಿಕೇತನ ಸಂಸ್ಥೆ ಮುಖ್ಯಾಧ್ಯಾಪಕ ಅಶೋಕ ಹಾಗೂ ಶಾಲಾ ಮುಖ್ಯ ಶಿಕ್ಷಕ ಅಖ್ತರ ಸಯ್ಯದ್ ಅವರು ಪೋಷಣ ಅಭಿಯಾನದ ರೂಪುರೇಷೆಗಳನ್ನು ತಿಳಿಸಿದರು.
ಸಹ ಶಿಕ್ಷಕಿ ರೂಪಾ ಉಮೇಶ ನಾಯ್ಕ ಪೋಷಕಾಂಶಗಳ ಮಹತ್ವದ ಬಗ್ಗೆ ಮಾತನಾಡಿದರು. ಆಹಾರದ ಗುಣಮಟ್ಟ ಪರಿಶೀಲಿಸಿ ಅದಕ್ಕೆ ತಕ್ಕಂತೆ ಬಹುಮಾನಗಳನ್ನು ನೀಡಲಾಯಿತು. ಶಿಕ್ಷಕರಾದ ರೂಪಾ ನಾಯ್ಕ, ರೇಶ್ಮಾ ಹುಲಸ್ವಾರ, ಪ್ರಿಯಾ, ಅಡುಗೆ ಸಿಬ್ಬಂದಿ ಶೋಭಾ ಮತ್ತು ಕಾಂಚನಾ ಹಾಜರಿದ್ದರು. ಅಖ್ತರ್ ಸಯ್ಯದ್ ಅವರು ಕಾರ್ಯಕ್ರಮ ನಿರ್ವಹಿಸಿದರು.