ದಾಂಡೇಲಿ :
ವಿಧಾನ ಸಭಾ ಮತ್ತು ವಿಧಾನ ಪರಿಷತ್ ಅಧಿವೇಶನದಲ್ಲಿ ಗೋ ಸಂರಕ್ಷಣಾ ಕಾಯ್ದೆ 2020 ತಿದ್ದುಪಡಿಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ನಗರದ ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಗೋ ಹತ್ಯೆ ಕಾಯ್ದೆಗೆ ತಿದ್ದುಪಡಿ ಮಾಡುವುದನ್ನು ತಕ್ಷಣವೇ ಕೈ ಬಿಡಬೇಕು ಹಾಗೂ ವಿಧಾನಸಭೆಯಲ್ಲಿ ಈ ತಿದ್ದುಪಡಿಯನ್ನು ಮಂಡಿಸದಂತೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಅವರ ಅನುಪಸ್ಥಿತಿಯಲ್ಲಿ ಆಹಾರ ನಿರೀಕ್ಷಕ ಗೋಪಿ ಚೌವ್ಹಾಣ್ ಅವರ ಮೂಲಕ ನೀಡಿದರು.
ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ಗೋವು ಸಂರಕ್ಷಣಾ ಕಾಯ್ದೆಯನ್ನು ಸಡಿಲಗೊಳಿಸಿ ತಿದ್ದುಪಡಿ ತರಲು ಸರ್ಕಾರ ಮುಂದಾಗಿ ಈ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಈ ವಿಚಾರ ಪಾಸಾಗಿದ್ದು, ಕೂಡಲೇ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಲಾಗಿದೆ. ಗೋ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 8 ರ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅವಕಾಶ ಇತ್ತು. ಅಕ್ರಮ ಗೋ ಸಾಗಾಟ ವಾಹನ ವಶಪಡಿಸಿಕೊಂಡಾಗ ಬ್ಯಾಂಕ್ ಗ್ಯಾರಂಟಿ ಕೊಡಬೇಕಾಗಿತ್ತು. ವಾಹನದ ಮೌಲ್ಯದಷ್ಟೇ ಬ್ಯಾಂಕ್ ಗ್ಯಾರಂಟಿ ಕೊಟ್ಟರೇ ಮಾತ್ರ ತಾತ್ಕಾಲಿಕ ಬಿಡುಗಡೆಗೆ ಅವಕಾಶವಿತ್ತು. ಪ್ರಕರಣದ ಅಪರಾಧ ಸಾಬೀತಾದರೆ ವಾಹನ ವಾಪಸ್ ತಂದು ಸರ್ಕಾರ ಮುಟ್ಟುಗೋಲು ಹಾಕುತ್ತಿತ್ತು. ತಪ್ಪಿದಲ್ಲಿ ಬ್ಯಾಂಕ್ ಗ್ಯಾರಂಟಿ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಈ ಎಲ್ಲ ನಿಯಮಗಳನ್ನು ಬದಲಾವಣೆ ಮಾಡಲು ಮುಂದಾಗುವ ಮೂಲಕ ಅಕ್ರಮ ಗೋ ಸಾಗಾಟಕರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ರಾಜ್ಯದಲ್ಲಿ ಅತ್ಯಂತ ಹಿಂಸಾತ್ಮಕವಾಗಿ ಒಂದೇ ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹತ್ತಾರು ಪಟ್ಟು ಹೆಚ್ಚು ಜಾನುವಾರುಗಳನ್ನು ಕ್ರೂರವಾಗಿ ಒಂದರ ಮೇಲೊಂದು ಹಾಕಿ ದುಡ್ಡಿನ ಆಸೆಗಾಗಿ ಸಾಗಾಟ ಮಾಡುತ್ತಿರುವುದು ಕಂಡುಬರುತ್ತಿತ್ತು. ಗೋ ಹತ್ಯೆ ಕಾಯ್ದೆ 2021 ರಲ್ಲಿ ಜಾರಿಯಾದ ನಂತರ ಈ ಕ್ರೂರತೆ ಒಂದಷ್ಟು ಕಡಿಮೆ ಆಗಿರುವುದು ಕಂಡು ಬಂದಿದೆ. ಆದರೆ ಇನ್ನೂ ಕೂಡ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡದ ಕಾರಣ ಹಲವು ಕಡೆ ಹಣದ ಆಸೆಗಾಗಿ ವಾಹನದ ಮಾಲಕರು ಕ್ರೂರವಾಗಿ ಜಾನುವಾರುಗಳನ್ನು ಸಾಗಿಸುವುದು ಕಂಡುಬಂದಿದೆ. ಇದನ್ನು ನಿಯಂತ್ರಿಸಬೇಕಾದರೆ ಈ ಕಾಯ್ದೆಯನ್ನು ಬಿಗಿಯಾದ ರೀತಿಯಲ್ಲಿ ಜಾರಿಗೊಳಿಸಬೇಕಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಟುಕರಿಗೆ ಹಾಗೂ ಅಕ್ರಮ ಗೋಕಳ್ಳರಿಗೆ ಸುಲಭವಾಗಿ ಸಾಗಾಟ ಮಾಡಲು ಅನುಕೂಲವಾಗುವಂತೆ ವಶಪಡಿಸಿಕೊಂಡಿರುವ ವಾಹನವನ್ನು ತಾತ್ಕಾಲಿಕ ಹಸ್ತಾಂತರಕ್ಕೆ ಬ್ಯಾಂಕ್ ಗ್ಯಾರಂಟಿ ಕೊಡುವುದನ್ನು ಕೈ ಬಿಡುವ ಬಗ್ಗೆ ಕಾಯ್ದೆಯನ್ನು ತಿದ್ದುಪಡಿ ಮಾಡದಂತೆ ಕ್ರಮ ಕೈಗೊಂಡು ರಾಜ್ಯದಲ್ಲಿ ಕಾನೂನು ರೀತಿಯಲ್ಲಿ ಮಾತ್ರ ಜಾನುವಾರುಗಳನ್ನು ಸಾಗಾಟ ಮಾಡುವಂತೆ ಕಾನೂನು ಜಾಗೃತಿ ಮಾಡಬೇಕಾಗಿದೆ.
ಈ ಕಾಯ್ದೆ ಕೇವಲ ಜಾನುವಾರು ವಧೆ ನಿಷೇಧಿಸುವ ಉದ್ದೇಶ ಮಾತ್ರವಲ್ಲದೇ ಸಂರಕ್ಷಣಾ ಕಾಯ್ದೆಯು ಆಗಿರುತ್ತದೆ. ಮುಖ್ಯವಾಗಿ ಗೋ ಸಾಗಾಟದ ಸಮಯದಲ್ಲಿ ಜಾನುವಾರುಗಳಿಗೆ ವಾಹನದ ಮಾಲಕರು ಮಾಡುವ ಕ್ರೂರ ಸಾಗಾಟವನ್ನು ನಿಲ್ಲಿಸಿ ಸಾಗಾಟದಲ್ಲಿ ಜಾನುವಾರುಗಳಿಗೆ ಆಗಬಹುದಾದಂತಹ ಹಿಂಸೆ ಗಾಯಗಳಿಂದ ಸಂರಕ್ಷಣೆ ಮಾಡುವ ಉದ್ದೇಶವನ್ನು ಹೊಂದಿದ್ದು, ಅದಕ್ಕಾಗಿ ಜಾನುವಾರು ಸಾಗಾಟ ನಿಯಮಾವಳಿಗಳನ್ನು ವಾಹನಗಳ ಮಾಲಕರೇ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮನೋಭಾವ ಸೃಷ್ಟಿಯಾಗಲು ಬಿಗಿಯಾದಂತಹ ಕಾನೂನು ರಚಿಸಲಾಗಿತ್ತು.
ಆದರೆ ಈಗ ರಾಜ್ಯ ಸರ್ಕಾರ ಈ ಕಾನೂನನ್ನು ದುರ್ಬಲಗೊಳಿಸುವ ಮೂಲಕ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುವ ಸಾಗಾಟಗಾರರಿಗೆ, ಗೋ ಹಂತಕರಿಗೆ ನೀವು ಹೇಗೆ ಬೇಕಾದರೂ ಸಾಗಾಟ ಮಾಡಬಹುದು ನಾವು ನಿಮ್ಮ ಜೊತೆಗಿದ್ದೇವೆ ಎಂದು ರಾಜ್ಯದ ಕಾಂಗ್ರೆಸ್ ಸರಕಾರ ಅವರಿಗೆ ನಿರ್ಭಯವನ್ನು ಕೊಟ್ಟಂತಾಗಿದೆ. ಪರಿಣಾಮವಾಗಿ ಗೋವುಗಳಿಗೆ ಹಿಂಸೆ ಹಾಗೂ ಅವುಗಳ ಹತ್ಯೆ ಇನ್ನು ಮುಂದೆ ಹೆಚ್ಚಾಗಲಿದೆ. ಗೋವನ್ನು ಪೂಜ್ಯ ಭಾವನೆಯಿಂದ ಮತ್ತು ಪೂಜಿಸಿ, ಆರಾಧಿಸಿಕೊಂಡು ಬರುವ ಹಿಂದುಗಳ ಧಾರ್ಮಿಕ ಶ್ರದ್ಧಾ ಮನೋಭಾವನೆಗೆ ಇದರಿಂದ ತೀವ್ರ ಘಾಸಿಯಾಗಲಿದೆ ಮತ್ತು ಹಿಂದೂಗಳ ಆಕ್ರೋಶ ಹೆಚ್ಚಾಗಿ ರಾಜ್ಯದಲ್ಲಿ ಅಶಾಂತಿ ಅರಾಜಕತೆ ಸೃಷ್ಡಿಯಾಗುವ ಸಾಧ್ಯತೆಯಿದೆ.
ಈ ತಿದ್ದುಪಡಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಮತ್ತು ಇದು ಜೀವಿಗಳಿಗೆ ನಿಷ್ಕರುಣೆ ತೋರಿಸುವ ತಿದ್ದುಪಡಿಯಾಗಿದೆ. ಆದ್ದರಿಂದ ಸಂವಿಧಾನದ ರಕ್ಷಣೆಗಾಗಿ ಈ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ರಾಜ್ಯಪಾಲರಿಗೆ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತು ದಾಂಡೇಲಿ ಪ್ರಖಂಡದ ಅಧ್ಯಕ್ಷ ಶ್ರೀನಾಥ ಪಾಸಲಕರ, ಕಾರ್ಯದರ್ಶಿ ಪ್ರಶಾಂತ ಕುಲಕರ್ಣಿ, ಪ್ರಮುಖರಾದ ವಾಸುದೇವ ಪ್ರಭು, ಬುಧವಂತಗೌಡ ಪಾಟೀಲ್, ಮಿಥುನ್ ನಾಯಕ, ಚಂದ್ರು ಮಾಳಿ, ಲಿಂಗಯ್ಯ ಪೂಜಾರ, ಬಾಬಾಣ್ಣ ಶ್ರೀವತ್ಸ, ದಯಾನಂದ ಮಲ್ಯ, ಅಶೋಕ ಪಾಟೀಲ್, ರವಿ ಅರ್ಮುಗಂ, ಸಂತೋಷ ಸೋಮನಾಚೆ, ಗೋಪಾಲ ಜಾಧವ, ಬಾಬಾಣ್ಣ ಶ್ರೀವತ್ಸ, ದಯಾನಂದ ಮಲ್ಯ, ಶಿವಾನಂದ ಗಗ್ಗರಿ, ರೀನಾ ಕಂಜಾರಬಾಟ್, ವಿನಯ ಹುಕ್ಕೇರಿ, ಗೋಪಿ ಶೇಳಾರ, ರಮೇಶ ಜಾಧವ, ಸಂತೋಷ ಬುಲುಬುಲೆ, ಅಶೋಕ ಕಾಮತ್, ಶ್ರೀನಾಥ ಮಿರಾಶಿ, ಸಂಜೀವ್ ಜಾಧವ ಹಾಗೂ ಸಂಘಟನೆಯ ಪ್ರಮುಖರು, ಕಾರ್ಯಕರ್ತರು, ಹಿಂದೂ ಧರ್ಮ ಬಾಂಧಧವರು ಉಪಸ್ಥಿತರಿದ್ದರು.
