ದಾಂಡೇಲಿ:
ಶನಿವಾರ ದಾಂಡೇಲಿ ನಗರದ ಹಳೆ ನಗರಸಭೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ರಜತ ಸಂಭ್ರಮದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ೨೫ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆಯವರು ಕನ್ನಡದ ಕಾರ್ಯಕ್ರಮಗಳನ್ನು ಕನ್ನಡದ ಕೆಲಸಗಳನ್ನು ಯಾರೇ ಮಾಡಿದರೂ ಕನ್ನಡಿಗರಾದ ನಾವು ಅದನ್ನು ಹೆಮ್ಮೆಯಿಂದ ಸ್ವಾಗತಿಸಬೇಕು ಮತ್ತು ಗೌರವಿಸಬೇಕು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ವಿಕಾಸದಲ್ಲಿ ಸಾಹಿತ್ಯ ಸಮ್ಮೇಳನಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇವುಗಳು ಇಂದಿನ ಪೀಳಿಗೆಯಲ್ಲಿ ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ, ಅರಿವು ಬೆಳೆಸುವ ಶಕ್ತಿಯುತ ವೇದಿಕೆಗಳಾಗಿವೆ. ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿಂತಕರು ಮತ್ತು ಸಾಹಿತಿಗಳ ವಿಚಾರ ವಿನಿಮಯದ ಮೂಲಕ ಈ ಸಮ್ಮೇಳನವು ಸಾರ್ಥಕತೆಯನ್ನು ಪಡೆದು ಯಶಸ್ವಿಯಾಗಲಿ. ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ವೈವಿಧ್ಯಮಯ ಸಂಸ್ಕೃತಿ, ಪ್ರತಿಭೆ ಮತ್ತು ಸೃಜನಶೀಲತೆಯನ್ನು ದೇಶಾದ್ಯಂತ ಪರಿಚಯಿಸುವ ಮಹತ್ವದ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು
