ಮುಂಡಗೋಡ: `ಮುಂಡಗೋಡನ್ನು ಹಿಂದೂಳಿದ ತಾಲೂಕು ಎಂದು ಗುರುತಿಸಿದಕ್ಕಾಗಿ ಜನ ಕೀಳರಿಮೆ ಭಾವನೆ ಹೊಂದುವ ಬದಲು ಸಿಕ್ಕ ಅವಕಾಶ ಬಳಸಿಕೊಂಡು ಮಾದರಿ ತಾಲೂಕು ಎಂಬ ಹೆಸರು ಪಡೆಯಬೇಕು\’ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಹೇಳಿದ್ದಾರೆ.
ದೈವಜ್ಞ ಕಲ್ಯಾಣ ಮಂಟಪದಲ್ಲಿ ಅಭಿವೃದ್ಧಿ ಆಕಾಂಕ್ಷಿ ತಾಲೂಕು ಕಾರ್ಯಕ್ರಮ ಅಡಿ ನಡೆದ ಪೂರ್ಣತಾ ಅಭಿಯಾನದ ಸಮಾರೂಪದಲ್ಲಿ ಅವರು ಮಾತನಾಡಿದ್ದು `ಮೂರು ತಿಂಗಳಿನಿ0ದ ನಡೆದ ಅಭಿಯಾನದಲ್ಲಿ ನಿಗದಿಪಡಿಸಲಾಗಿದ್ದ 6 ಸೂಚ್ಯಂಕಗಳ ಪೈಕಿ 5 ಸೂಚ್ಯಂಕಗಳಲ್ಲಿ 100 ಪ್ರತಿಶತ ಗುರಿ ಸಾಧಿಸಿರುವುದು ಹೆಮ್ಮೆಯ ಸಂಗತಿ. ಕಡಿಮೆ ಅವಧಿಯಲ್ಲಿ ಈ ಎಲ್ಲ ಅಂಶಗಳಲ್ಲಿ ಗುರಿಸಾಧಿಸುವುದು ಸಣ್ಣ ವಿಷಯವಾಗಿರಲಿಲ್ಲ. ಆದರೆ ತಾಲೂಕಿನ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಮಹಿಳೆಯರು ಮತ್ತು ಸಾರ್ವಜನಿಕರ ಸಹಕಾರ ಮಹತ್ವದ್ದಾಗಿತ್ತು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಆಕಾಂಕ್ಷಿ ಕಾರ್ಯಕ್ರಮದ ನಿಗದಿತ ಎಲ್ಲ ಸೂಚ್ಯಂಕಗಳಲ್ಲಿ ಗುರಿ ಸಾಧಿಸಿ, ತಾಲೂಕನ್ನು ಅಭಿವೃದ್ಧಿ ಹೊಂದಿದ ತಾಲೂಕಾಗಿ ರೂಪಿಸಲು ಎಲ್ಲರು ಶ್ರಮಿಸೋಣ\’ ಎಂದರು.
ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಮಾತನಾಡಿ `ತಾಲೂಕಿನಲ್ಲಿ ಕಳೆದ ಮೂರು ತಿಂಗಳಿನಿ0ದ ನಿರಂತರವಾಗಿ ಕಾರ್ಯಕ್ರಮಗಳು, ತರಬೇತಿ, ಮನೆ ಮನೆ ಭೇಟಿ, ಸ್ಪರ್ಧೆಗಳು, ಕಾರ್ಯಾಗಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಲಾಗಿದೆ. ಈ ಕಾರ್ಯಕ್ರಮಗಳು ಸಂಪೂರ್ಣತಾ ಅಭಿಯಾನಕ್ಕೆ ಮಾತ್ರ ಸೀಮಿತವಾಗದೆ ಮುಂದಿನ ದಿನಗಳಲ್ಲಿಯೂ ಮುಂದುವರಿಸಿಕೊoಡು ಹೋಗಬೇಕು. ಆ ಮೂಲಕ ತಾಲೂಕಿನ ಸರ್ವತೋಮುಖ ಪ್ರಗತಿ ಕಾರಣವಾಗಬೇಕು\’ ಎಂದರು.
ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ, ಶಿಶುಗಳಿಗೆ ಅನ್ನ ಪ್ರಾಸನ, ಹುಟ್ಟು ಹಬ್ಬ ಆಚರಣೆ ನಡೆಸಲಾಯಿತು. ನಂತರ ಅಭಿಯಾನದ ಯಶಸ್ಸಿಗೆ ಕಾರಣವಾದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮತ್ತು ಅಭಿಯಾನದ ವೇಳೆ ವಿವಿಧ ಕಾರ್ಯಕ್ರಮದಲ್ಲಿ ಶ್ರಮವಹಿಸಿದ ಎಲ್ಲರಿಗೆ ಪ್ರಶಂಸನಾ ಪತ್ರ ನೀಡಿ, ಅಭಿನಂದಿಸಲಾಯಿತು.
ಕಾರ್ಯಕ್ರಮದ ಬಳಿಕ ತಾಲೂಕಿನ ಸಾಲಗಾಂವ ಗ್ರಾಮದಲ್ಲಿ ಎನ್.ಆರ್.ಎಲ್.ಎಮ್. ಸಂಜೀವಿನಿ ಒಕ್ಕೂಟದ ಶ್ರೀ ಗಜಲಕ್ಷ್ಮೀ ಮಹಿಳಾ ಸ್ವ ಸಹಾಯ ಸಂಘದ ನೂತನ ಶ್ರೀ ಸಾಯಿ ಶೇಂಗಾ ಚಿಕ್ಕಿ ತಯಾರಿಕಾ ಘಟಕವನ್ನು ಉದ್ಘಾಟಿಸಿ, ಘಟಕವನ್ನು ವೀಕ್ಷಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಬಳಿಕ ನಾಗನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ಆರಂಭಿಸಿದ ಸಂಜೀವಿನಿ ಡಿಜಿ ಶಾಲಾ ಕೇಂದ್ರವನ್ನು ಉದ್ಘಾಟಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್. ದಾಸನಕೊಪ್ಪ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಶ್ವರಿ ಕದಂ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮು ಬಯಲುಸೀಮೆ, ತಾಲೂಕು ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಭರತ, ಪಶು ಇಲಾಖೆಯ ಅಧಿಕಾರಿ ಕೃಷ್ಣಮೂರ್ತಿ ಹೆಗಡೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸ್ವ ಸಹಾಯ ಸಂಘದ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
32 ಸಾವಿರ ಅರಣ್ಯವಾಸಿಗರಿಗೆ ಉಚಿತ ಜಿಪಿಎಸ್ ಮೇಲ್ಮನವಿ
ಶಿರಸಿ: `ಅರಣ್ಯ ಹಕ್ಕು ಕಾಯಿದೆಯಲ್ಲಿ ಅಸಮರ್ಪಕ ಜಿಪಿಎಸ್ ಸಂಬoಧಿಸಿ ಹೋರಾಟಗಾರರ ವೇದಿಕೆಯು ಜಿಲ್ಲಾದ್ಯಂತ ಸುಮಾರು 32 ಸಾವಿರಕ್ಕಿಂತ ಮಿಕ್ಕಿ ಅರಣ್ಯವಾಸಿಗಳ ಕುಟುಂಬಗಳಿAದ ಜಿಪಿಎಸ್ ಮೇಲ್ಮನವಿ ಮಾಡುವ ಮೂಲಕ ಅರಣ್ಯವಾಸಿಗಳಿಗೆ ಕಾನೂನಾತ್ಮಕ ಬೆಂಬಲ ನೀಡಲಾಗಿದೆ\’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಜಿಪಿಎಸ್ ಮೇಲ್ಮನವಿ ಪ್ರತಿಯನ್ನು ವಿತರಿಸಿದ ಅವರು `ಉತ್ತರ ಕನ್ನಡ ಜಿಲ್ಲೆಯಲ್ಲಿ 87,757 ಅರ್ಜಿಗಳು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅವುಗಳಲ್ಲಿ ಪ್ರಥಮ ಹಂತದಲ್ಲಿ 67,333 ಕುಟುಂಬದ ಅರ್ಜಿಗಳು ತಿರಸ್ಕಾರವಾಗಿದೆ. ಜಿಪಿಎಸ್ ಆಗಿರುವಂತಹ ಪ್ರಕರಣಗಳಲ್ಲಿ ಕೊಟ್ಟಿಗೆ, ಸಾಗುವಳಿ ಕ್ಷೇತ್ರ, ಗೊಣವೆ, ಅಂಗಳ ಮುಂತಾದ ಜೀವನ ಅವಶ್ಯ ಸಾಗುವಳಿ ಕ್ಷೇತ್ರ ಬಿಟ್ಟಿರುವದರಿಂದ ಮೇಲ್ಮನವಿ ಅಭಿಯಾನ ಜರುಗಿಸುವುದು\’ ಎಂದರು.
`ನ. 7 ರಂದು ಬೆಂಗಳೂರಿನ ಪ್ರೀಡಮಂ ಪಾರ್ಕನಲ್ಲಿ ಜರುಗಲಿರುವ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯವಾಸಿಗಳು ಭಾಗವಹಿಸಬೇಕು\’ ಎಂದು ಕರೆ ನೀಡಿದರು. ರಾಜು ನರೇಬೈಲ್, ಇಬ್ರಾಹಿಂ ಗೌಡಳ್ಳಿ, ನಾಗರಾಜ ಸದಾಶಿವ ದೇವಸ್ಥಳಿ, ಎಮ್. ಆರ್. ನಾಯ್ಕ ಮಾತನಾಡಿದ್ದರು. ನೆಹರು ನಾಯ್ಕ, ಗಂಗೂಬಾಯಿ.ಆರ್.ರಜಪೂತ, ಮಲ್ಲೇಶ ಬಸವಂತಪ್ಪ ಬಾಳೇಹಳ್ಳಿ, ಚಂದ್ರಶೇಖರ ಶ್ರೀಕಾಂತ ಶಾನಭಾಗ, ಕಲ್ಪನಾ ಪಾವಸ್ಕರ್ ದೊಡ್ನಳ್ಳಿ, ರಮೇಶ ಮರಾಠಿ ಉಪಸ್ಥಿತರಿದ್ದರು.
ಕಂದಾಯ – ಅರಣ್ಯ ಸಚಿವರ ಜಿಲ್ಲಾ ಪ್ರವಾಸ
ಕಾರವಾರ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅ 8ರಂದು ಉತ್ತರ ಕನ್ನಡ ಜಿಲ್ಲೆಗೆ ಬರಲಿದ್ದಾರೆ.
ಅಂದು ಮಧ್ಯಾಹ್ನ 2 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ.
ಅರಣ್ಯ ಸಚಿವರ ಸಂಚಾರ
ಅರಣ್ಯ, ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಅ 9 ರಂದು ಉತ್ತರ ಕನ್ನಡ ಜಿಲ್ಲೆಗೆ ಬರಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಸತಿ ಗೃಹ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ದಾಂಡೇಲಿಯ ವನ್ಯಜೀವಿ ಸಂಶೋಧನೆ ಮತ್ತು ತರಬೇತಿ ಕೇಂದ್ರದಲ್ಲಿ ನಡೆಯುವ ಕೆನರಾ ವೃತ್ತದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ದಾಂಡೇಲಿ, ನಂತರ ಕುಂಬಾರವಾಡಗಳಿಗೆ ತೆರಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಚಟುವಟಿಕೆಗಳ ಪರಿಶೀಲನೆ ಮಾಡಲಿದ್ದಾರೆ.
ಕುಮಟಾದಲ್ಲಿ ವಿದ್ಯುತ್ ಕಡಿತ
ಕುಮಟಾ: ಅಕ್ಟೊಬರ್ 9ರಂದು ಕುಮಟಾದ ಹಲವು ಕಡೆ ವಿದ್ಯುತ್ ಸರಬರಾಜು ಇರುವುದಿಲ್ಲ. ಅಂದು ಬೆಳಗ್ಗೆ 10 ಗಂಟೆಯಿoದ ಸಂಜೆ 5ಗಂಟೆಯವರೆಗೆ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಉಳ್ಳೂರುಮಠ, ಕೂಜಳ್ಳಿ ಹಾಗೂ ಮೂರುರುಫೀಡರಿನ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತ ಆಗಲಿದೆ.
ನವರಾತ್ರಿ ಅಂಗವಾಗಿ ಕುಂಕುಮ ಅರ್ಚನೆ
ಗೋಕರ್ಣ: ನವರಾತ್ರಿ ಮಹೋತ್ಸವದ ಐದನೇ ದಿನವಾದ ಸೋಮವಾರ ತಾಮ್ರಗೌರಿ ಮಂದಿರದಲ್ಲಿ ಮುತ್ತೆöÊದೆಯರಿಂದ ಕುಂಕುಮಾರ್ಚನೆ ನಡೆಯಿತು. ಈ ದಇನ ಚಂಡಿ ಹೋಮ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಂಪಾದಕರ ಕಿವಿಮಾತು
ಯಲ್ಲಾಪುರ: `ಪತ್ರಕರ್ತರಿಗೆ ತಾನು ಪರಿಪೂರ್ಣ ಎಂಬ ಭಾವನೆ ಎಂದಿಗೂ ಬರಬಾರದು\’ ಎಂದು ಹಿರಿಯ ಪತ್ರಕರ್ತ ಕೆ.ಎನ್.ಚನ್ನೇಗೌಡ ಹೇಳಿದರು
ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪತ್ರಿಕೋದ್ಯಮದ ಪ್ರಸ್ತುತ ಸ್ಥಿತಿಗತಿ ಹಾಗೂ ಸವಾಲು ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಪತ್ರಿಕೋದ್ಯಮದಲ್ಲಿ ಪ್ರತಿದಿನವೂ ಕಲಿಕೆ ಇರುತ್ತದೆ. ಹೊಸತನಕ್ಕೆ ಒಗ್ಗಿಕೊಳ್ಳುವ ಗುಣ ಇದ್ದವರಿಗೆ ಮಾತ್ರ ಪತ್ರಿಕೋದ್ಯಮದಲ್ಲಿ ಯಶಸ್ಸು ಸಾಧ್ಯ\’ ಎಂದರು. `ಎಲ್ಲ ವರ್ಗದವರಿಗೂ ಆಪ್ತವಾಗುವಂತೆ ರೂಪಿಸಿದಾಗ ಪತ್ರಿಕೆ ಜನಪ್ರಿಯವಾಗುತ್ತದೆ. ಡಿಜಿಟಲ್ ಮಾಧ್ಯಮಗಳ ಪೈಪೋಟಿಯ ನಡುವೆಯೂ ಮುದ್ರಣ ಮಾಧ್ಯಮ ಇನ್ನಷ್ಟು ಗಟ್ಟಿಯಾಗಲು ತಂತ್ರಜ್ಞಾನಗಳ ಅಳವಡಿಕೆ ಹಾಗೂ ಹೊಸ ಆಯಾಮ ಕಾರ್ಯನಿರ್ವಹಿಸುವಿಕೆ ಅನಿವಾರ್ಯ\’ ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ `ಪಠ್ಯದ ಜೊತೆಗೆ ಭಾಷೆ, ಬರವಣಿಗೆ, ಸಾಮಾಜಿಕ ಕಳಕಳಿ, ದೇಶಪ್ರೇಮ ಮೂಡಿಸಿ ಉತ್ತಮ ಪತ್ರಕರ್ತರನ್ನು ರೂಪಿಸುವುದು ನಮ್ಮ ಉದ್ದೇಶ\’ ಎಂದರು. ಪ್ರಾಚಾರ್ಯ ನಾಗರಾಜ ಇಳೆಗುಂಡಿ ಪ್ರಸ್ತಾಪಿಸಿದರು. ಪತ್ರಿಕೋದ್ಯಮದ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಕೆ.ಎನ್.ಚನ್ನೆಗೌಡ ಉತ್ತರಿಸಿದರು. ಉಪನ್ಯಾಸಕ ಬೀರಣ್ಣ ನಾಯಕ ಮೊಗಟಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಶೋಭಾ ಗೌಡ ಪ್ರಾರ್ಥಿಸಿದರು. ನಾಗರಾಜ ಪಟಗಾರ ನಿರ್ವಹಿಸಿದರು. ವಿದ್ಯಾ ಶೆಟ್ಟನಗೌಡ್ರ ವಂದಿಸಿದರು.