ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಭಟ್ಕಳ ಉಪವಿಭಾಗಾಧಿಕಾರಿ ನಯನಾ ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರ ಆಗಮನವನ್ನು ನಿಷೇಧಿಸಿದ್ದಾರೆ. ಜಿಲ್ಲಾಧಿಕಾರಿಗಳ ಮೌಖಿಕ ಸೂಚನೆ ಮೇರೆಗೆ ಈ ಆದೇಶ ಹೊರಡಿಸಿರುವುದಾಗಿ ನಯನಾ ಅವರು ಹೇಳಿಕೊಂಡಿದ್ದು, ಪ್ರವಾಸಿಗರನ್ನು ಬಿಡದಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. `ತಾನೂ ಯಾವುದೇ ಸೂಚನೆ ನೀಡಿಲ್ಲ\’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿ ಹೆಸರು ದುರುಪಯೋಗಪಡಿಸಿಕೊಂಡ ಕಾರಣ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದ್ದಾರೆ.
ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ದೊರೆತ ನಂತರ ಮುರುಡೇಶ್ವರಕ್ಕೆ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಈಚೆಗೆ ಬೆಂಗಳೂರು ಮೂಲದ ಗೌಥಮ್ ಎಂಬಾತ ಮುರುಡೇಶ್ವರ ಕಡಲತೀರದಲ್ಲಿ ಸಾವನಪ್ಪಿದ್ದು, ಇದನ್ನೆ ನೆಪವಾಗಿರಿಸಿಕೊಂಡು ಉಪವಿಭಾಗಾಧಿಕಾರಿ ನಯನಾ ಪ್ರವಾಸಿಗರ ಪ್ರವೇಶಕ್ಕೆ ತಡೆ ಒಡ್ಡಿದ್ದಾರೆ. ತಾವು ಹೊರಡಿಸಿದ ಆದೇಶದಲ್ಲಿ ಜಿಲ್ಲಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ತಡೆ ಒಡ್ಡಲಾಗಿದೆ ಎಂದವರು ಬರೆದಿದ್ದು, ಆದೇಶ ಹೊರಬರುವವರೆಗೂ ಜಿಲ್ಲಾಧಿಕಾರಿಗಳಿಗೆ ಮಾಹಿತಿಯೇ ಇರಲಿಲ್ಲ!
ಮುರುಡೇಶ್ವರಕ್ಕೆ ಆಗಮಿಸಿದ ಪ್ರವಾಸಿಗರಿಗೆ ಏಕಾಏಕಿ ನಿಷೇಧ ಹೇರಿದ ಹಿನ್ನಲೆ ಪ್ರವಾಸಿಗರು ತೊಂದರೆ ಅನುಭವಿಸಿದರು. ಇದರೊಂದಿಗೆ ಪ್ರವಾಸೋದ್ಯಮ ಚಟುವಟಿಕೆ ನಡೆಸುವವರಿಗೆ ಸಹ ನಿರ್ಬಂಧ ಹೇರಲಾಗಿದ್ದರಿಂದ ಅವರು ಸಮಸ್ಯೆಗೆ ಸಿಲುಕಿದರು. ಪ್ರವಾಸೋದ್ಯಮ ಇಲಾಖೆಗೆ ಸುರಕ್ಷತಾ ಕ್ರಮ ಜರುಗಿಸುವಂತೆ ಪತ್ರ ಬರೆಯಲಾಗಿದ್ದು, ಸುರಕ್ಷತಾ ಕ್ರಮ ಪಾಲನೆ ಆಗುವವರೆಗೆ ಕಡಲತೀರ ಪ್ರವೇಶ ನಿರ್ಬಂಧಿಸಿರುವುದಾಗಿ ಉಪವಿಭಾಗಾಧಿಕಾರಿ ಆದೇಶದಲ್ಲಿ ಬರೆಯಲಾಗಿದೆ.