ಸಿದ್ದಾಪುರ: ಕೋಡ್ಕಣಿ ಗ್ರಾಮದಲ್ಲಿ ಭೂಮಿ ಹೊಂದಿದ ಮಾವಿನಗುಂಡಿಯ ಜೀಕನಮಡಕಿ ಗೋವಿಂದ ಬೀರಾ ನಾಯ್ಕ (45) ಅವರಿಗೆ ಜಮೀನಿಗೆ ತೆರಳಲು ಭಯವಾಗುತ್ತಿದೆ. ಕಾರಣ ಅದೇ ಊರಿನ ರಮೇಶ ಗಣಪಾ ನಾಯ್ಕ ತೊಂದರೆ ಮಾಡುತ್ತಿದ್ದಾರೆ. ಈ ವಿಷಯವಾಗಿ ಗೋವಿಂದ ನಾಯ್ಕರು ಪೊಲೀಸ್ ದೂರು ನೀಡಿದ್ದು, ಪೊಲೀಸ್ ದೂರು ನೀಡಿದ ಕಾರಣ ನಾಲ್ವರು ಅವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ!
ಗೋವಿಂದ ನಾಯ್ಕ ಅವರಿಗೆ ಕೋಡ್ಕಣಿ ಗ್ರಾಮದಲ್ಲಿ ಪಿತ್ರಾರ್ಜಿತವಾಗಿ ಬಂದ ಭೂಮಿಯಿದ್ದು, ಅದಕ್ಕೆ ಅಳವಡಿಸಿದ ಬೇಲಿಯನ್ನು ರಮೇಶ ನಾಯ್ಕ ನಾಶ ಮಾಡಿದ್ದರು. ಈ ಬಗ್ಗೆ ಗೋವಿಂದ ನಾಯ್ಕ ಪೊಲೀಸ್ ದೂರು ನೀಡಿದ್ದು, ಪೊಲೀಸರು ಇಬ್ಬರನ್ನು ಕರೆಯಿಸಿ ವಿಚಾರಣೆ ನಡೆಸಿದ್ದರು. ಇದರಿಂದ ಸಿಟ್ಟಾದ ರಮೇಶ ನಾಯ್ಕ ತನ್ನ ಸಹೋದರರಿಗೆ ಈ ವಿಷಯ ತಿಳಿಸಿದ್ದಾರೆ.
ಅಕ್ಟೊಬರ್ 5ರಂದು ರಮೇಶ ಗಣಪಾ ನಾಯ್ಕ ಜೊತೆ ಬಂದ ಮಂಜುನಾಥ ಗಣಪಾ ನಾಯ್ಕ, ತಿಮ್ಮಪ್ಪ ಗಣಪಾ ನಾಯ್ಕ, ಮಂಜುನಾಥ ಕಿನ್ನಾ ನಾಯ್ಕ ಮತ್ತೆ ಗೋವಿಂದ ನಾಯ್ಕರಿಗೆ ಬೆದರಿಕೆ ಒಡ್ಡಿದ್ದಾರೆ. `ನಿನ್ನ ಜಮೀನು ನಾವು ಅತಿಕ್ರಮಣ ಮಾಡುತ್ತೇವೆ. ನಿನ್ನಿಂದ ಏನೂ ಮಾಡಲಾಗುವುದಿಲ್ಲ\’ ಎಂದು ಹೇಳಿದ್ದಾರೆ. ಜೊತೆಗೆ ಕೈಯಲ್ಲಿ ಹಿಡಿದ ಕತ್ತಿ ಹಾಗೂ ಬಡಿಗೆ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ. ಈ ವಿಷಯವಾಗಿ ಗೋವಿಂದ ನಾಯ್ಕರು ಮತ್ತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.