ಮಕ್ಕಳು ಶಾಲೆಗೆ ಬರಲು ರಸ್ತೆ ಸಮಸ್ಯೆ ಎದುರಾದಾಗ ಏಕಾಂಗಿಯಾಗಿ ದುಡಿದು ರಸ್ತೆ ರಿಪೇರಿ ಮಾಡಿದವರು ಶಿಕ್ಷಕಿ ಉಷಾ ನಾಯಕ. ಯಲ್ಲಾಪುರದ ನಂದೂಳ್ಳಿ ವ್ಯಾಪ್ತಿಯ ಬೇಲಿಕೇಣಿ ಶಿಕ್ಷಕಿಯಾಗಿರುವ ಅವರು ಮಕ್ಕಳು ಹಾಗೂ ಪಾಲಕರ ಕಷ್ಟ ಅರಿತು ರಸ್ತೆ ಹೊಂಡಕ್ಕೆ ಕಲ್ಲು-ಮಣ್ಣನ್ನು ಸುರಿದು ಸಮದಟ್ಟು ಮಾಡಿದ್ದಾರೆ.
ಉಷಾ ನಾಯಕ ಅವರು ಕಲಿಸುವ ಶಾಲೆಯಲ್ಲಿ 5 ಮಕ್ಕಳಿದ್ದಾರೆ. ಆ ಮಕ್ಕಳು ನಿತ್ಯ ಶಾಲೆಗೆ ಬರುವಾಗ ರಸ್ತೆ ರಾಡಿ ಕಾರಣ ಮೈ ಬಣ್ಣ ಬದಲಿಸಿಕೊಳ್ಳುತ್ತಿದ್ದರು. ಉಷಾ ನಾಯಕ ಅವರು ಸಹ ಅದೇ ರಸ್ತೆಯಲ್ಲಿ ಓಡಾಡಬೇಕಿದ್ದು, ನಿತ್ಯ ಸಮಸ್ಯೆ ಅನುಭವಿಸುತ್ತಿದ್ದರು. ಊರಿನ ಅನೇಕರಲ್ಲಿ ಶಿಕ್ಷಕಿ ಮಕ್ಕಳ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದು, ಕೊನೆಗೆ ಸ್ವತಃ ಅವರೇ ಕಲ್ಲು-ಮಣ್ಣುಗಳನ್ನು ಹೊತ್ತು ರಸ್ತೆಯ ಹೊಂಡ ಮುಚ್ಚಿದರು.
ಶಾಲೆಗೆ ಬರುವ ರಸ್ತೆಯಲ್ಲಿ ಹೊಸದಾಗಿ ಸೇತುವೆ ನಿರ್ಮಿಸಲಾಗಿದ್ದು, ಸೇತುವೆಯ ಎರಡೂ ಕಡೆ ಮಳೆಯಿಂದ ರಸ್ತೆ ಹಾಳಾಗಿದೆ. ಅಲ್ಲೆಲ್ಲವೂ ರಾಡಿ ತುಂಬಿಕೊoಡಿದ್ದರಿoದ ಓಡಾಡುವ ಎಲ್ಲರೂ ಸಮಸ್ಯೆ ಅನುಭವಿಸುತ್ತಿದ್ದಾರೆ. ಮಕ್ಕಳ ಸಮಸ್ಯೆ ವಿಪರೀತವಾದಾಗ ಅಕ್ಕಪಕ್ಕದ ಕಲ್ಲುಗಳನ್ನು ತಂದು ರಾಡಿಯಾಗಿದ್ದ ರಸ್ತೆಯಲ್ಲಿ ಹಾಕಿ ತಾತ್ಕಾಲಿಕವಾಗಿ ರಸ್ತೆ ರಿಪೇರಿ ಮಾಡಿದರು.
ಪ್ರಸ್ತುತ ವಾಹನ ಓಡಾಟಕ್ಕೆ ಕೊಂಚ ಅನುಕೂಲಾಗಿದೆ.