ಯಲ್ಲಾಪುರ – ಅಂಕೋಲಾ ಗಡಿಭಾಗವಾದ ಗುಳ್ಳಾಪುರ ಸೇತುವೆ ಕುಸಿದು ಮೂರು ವರ್ಷ ಕಳೆದಿದೆ. ಘಟಾನುಘಟಿಗಳೇ ಕ್ಷೇತ್ರಕ್ಕೆ ಬಂದು ಹೋದರೂ ಅಲ್ಲಿ ಸೇತುವೆ ನಿರ್ಮಾಣ ನಡೆದಿಲ್ಲ. ಹೀಗಾಗಿ ಶಿವರಾಮ ಭಟ್ಟ ಗುಡ್ಡೆ ಅವರ ನೇತ್ರತ್ವದಲ್ಲಿ ಊರಿನವರೆಲ್ಲ ಸೇರಿ ತೆಪ್ಪ ನಿರ್ಮಿಸಿಕೊಂಡಿದ್ದಾರೆ. ಆ ತೆಪ್ಪದ ಮೂಲಕವೇ ಸಾಹಸದಿಂದ ಸಂಚರಿಸುತ್ತಿದ್ದಾರೆ!
ಒoದೆಡೆ ನದಿಯಲ್ಲಿ ತುಂಡಾಗಿ ಬಿದ್ದಿರುವ ಸೇತುವೆ, ಮತ್ತೊಂದೆಡೆ ಮೈದುಂಬಿ ಹರಿಯುತ್ತಿರುವ ಗಂಗಾವಳಿ ನದಿಯಲ್ಲಿ ಪ್ರತಿನಿತ್ಯ ಹಗ್ಗ ಹಿಡಿದು ತೆಪ್ಪದ ಮೂಲಕ ಜಲಸಾಹಸದ ಮೂಲಕ ಸಂಪರ್ಕ ಸಾದಿಸುತ್ತಿರುವ ಜನ ಗುಳ್ಳಾಪುರದ ಅಂಚಿನಲ್ಲಿ ಕಾಣಿಸುತ್ತಾರೆ. ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಪಂ ವ್ಯಾಪ್ತಿಯ ಗುಳ್ಳಾಪುರದಿಂದ ಅಂಕೋಲಾ ತಾಲೂಕಿನ ಡೊಂಗ್ರಿ ಗ್ರಾ ಪಂ. ವ್ಯಾಪ್ತಿಯ ಹೆಗ್ಗಾರಿಗೆ ಪ್ರಯಾಣಿಸಬೇಕು ಎಂದಾದರೆ ಈ ತೆಪ್ಪದ ನಡಗೆ ಅನಿವಾರ್ಯ.
2021ರ ಜು 27ರಂದು ಸುರಿದ ಮಳೆ-ಪ್ರವಾಹದಿಂದ ಗಂಗಾವಳಿ ನದಿಗೆ ಅಡ್ಡಲಾಗಿದ್ದ ಸೇತುವೆ ಕುಸಿಯಿತು. ಇದರಿಂದ ಗಂಗಾವಳಿ ನದಿ ಪಾತ್ರದ ಜನರ ಬದುಕು ಇನ್ನಷ್ಟು ಕಷ್ಟಕ್ಕೆ ಸಿಲುಕಿತು. ರಾಮನಗುಳಿಯಲ್ಲಿದ್ದ ತೂಗು ಸೇತುವೆ ಸಹ ಕೊಚ್ಚಿ ಹೋಗಿದ್ದರಿಂದ ಜನ ಇನ್ನಷ್ಟು ಸಮಸ್ಯೆ ಅನುಭವಿಸಿದರು. ಅಂದಿನಿAದ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡು ಜನಜೀವನ ಅಸ್ತವ್ಯಸ್ತಗೊಂಡಿದ್ದವು. ಈ ನಡುವೆ ಅಂಕೋಲಾ ವ್ಯಾಪ್ತಿಯ ರಾಮನಗುಳಿಯಲ್ಲಿ ಹೊಸ ಸೇತುವೆ ನಿರ್ಮಿಸಿದ್ದು, ಯಲ್ಲಾಪುರ ವ್ಯಾಪ್ತಿಯ ಗುಳ್ಳಾಪುರದಲ್ಲಿ ಮಾತ್ರ ಸೇತುವೆ ಕನಸು ಈಡೇರಲಿಲ್ಲ.
ಭೀಕರ ಪ್ರವಾಹದ ರಭಸಕ್ಕೆ ಹಾನಿಗೊಳಗಾದ ಪ್ರದೇಶವನ್ನು ವೀಕ್ಷಿಸಲು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆಗಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಅನೇಕರು ಬಂದಿದ್ದರು. ಆದರೆ, ಅವರು ಬಂದುಹೋದ ವೆಚ್ಚದಷ್ಟು ಅನುದಾನ ಸಹ ಸೇತುವೆಗೆ ಸಿಕ್ಕಿಲ್ಲ. ಹೀಗಾಗಿ ಹೆಗ್ಗಾರ, ಶೇವ್ಕಾರ, ಕೈಗಡಿಯ 3 ಸಾವಿರಕ್ಕೂ ಅಧಿಕ ಜನ ಹಣ ಒಗ್ಗೂಡಿಸಿ ಸಣ್ಣ ಸೇತುವೆ ನಿರ್ಮಿಸಿದರು. ಆದರೆ, ನಂತರ ಸುರಿದ ಮಳೆಗೆ ಆ ಸೇತುವೆ ಸಹ ನೀರು ಪಾಲಾಯಿತು. ಪ್ರಸ್ತುತ ಮತ್ತೆ ಊರಿನವರೆಲ್ಲ ಸೇರಿ ಸ್ವಂತ ಹಣ ಹೂಡಿ ತೆಪ್ಪ ಮಾಡಿಕೊಂಡಿದ್ದಾರೆ. ನೀರು ಕಡಿಮೆ ಇದ್ದಾಗ ಮಾತ್ರ ತೆಪ್ಪದ ಮೇಲೆ ಸಂಚರಿಸಲು ಸಾಧ್ಯವಾಗುತ್ತಿದ್ದು, ಮಳೆ ಅವಧಿಯಲ್ಲಿ ಅಲ್ಲಿನವರು 15ಕಿಮೀ ಸುತ್ತುವರೆಯುವುದು ಅನಿವಾರ್ಯ.
ಕೊಡಸಳ್ಳಿ ನಿರಾಶ್ರಿತರಿಗೆ ಮತ್ತೊಮ್ಮೆ ನಿರಾಸೆ
1998 ರಲ್ಲಿ ಬಂದ ಕಾಳಿ ನದಿ ಪಾತ್ರದ ಕೊಡಸಳ್ಳಿ ನಿರಾಶ್ರಿತರ 700 ಕುಟುಂಬಗಳು ಹೆಗ್ಗಾರ, ಕೈಗಡಿ, ಶೇವ್ಕಾರ ಗ್ರಾಮದಲ್ಲಿ ಆಶ್ರಯ ಪಡೆದಿದ್ದರು. ಅಂದು ನಿರಾಶ್ರಿತರಾಗಿದ್ದವರು ಸೇತುವೆ ಕುಸಿತದಿಂದ ಮತ್ತೆ ನಿರಾಶ್ರಿತ ಬದುಕಿಗೆ ಹೋಗಿದ್ದಾರೆ.
ಹೆಗ್ಗಾರ ಭಾಗದ ಹತ್ತಾರು ವಿದ್ಯಾರ್ಥಿಗಳು ಈ ತೆಪ್ಪದ ಮೂಲಕವೇ ಶಾಲೆಗೆ ತೆರಳುತ್ತಿದ್ದು, ಪಾಲಕರಿಗೆ ಮಾತ್ರ ಮಕ್ಕಳು ಮನೆಗೆ ಬರುವವರೆಗೂ ನೆಮ್ಮದಿಯಿಲ್ಲ.
– ಅಕ್ಷಯಕುಮಾರ ಎಸ್