ಕಾರವಾರ: ಸ್ವಂತ ಬೈಕಿನಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಮಾಜಾಳಿಯ ಗ್ರಾಮ ಲೆಕ್ಕಾಧಿಕಾರಿ ದೀಪಕ ನಾಯ್ಕ ಇದೀಗ ಅವರಿವರ ವಾಹನ ಏರಿ ಊರೂರು ಅಲೆದಾಡುತ್ತಿದ್ದಾರೆ. ಕಾರಣ ಜಿಲ್ಲಾ ಆಸ್ಪತ್ರೆ ಆವರಣದೊಳಗೆ ನಿಲ್ಲಿಸಿದ್ದ ಅವರ ಬೈಕ್ ಕಳ್ಳತನವಾಗಿದೆ.
ನಂದನಗದ್ದಾದಲ್ಲಿ ವಾಸವಿರುವ ದೀಪಕ ರಮಾಕಾಂತ ನಾಯ್ಕ ಅವರ ಮಗ ಅನಾರೋಗ್ಯಕ್ಕೀಡಾಗಿದ್ದು, ಈ ಹಿನ್ನಲೆ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿ ಅವಧಿಯಲ್ಲಿ ಸಹ ಆಸ್ಪತ್ರೆಯಲ್ಲಿ ಪುತ್ರನ ಜೊತೆ ಅವರು ಇರುತ್ತಿದ್ದರು. ಅ. 3ರ ರಾತ್ರಿ ಕೊನೆಯದಾಗಿ ಅವರು ಬೈಕಿನಲ್ಲಿ ಸಂಚರಿಸಿದ್ದು, ಆ ಬೈಕನ್ನು ಆಸ್ಪತ್ರೆ ಆವರಣದೊಳಗೆ ನಿಲ್ಲಿಸಿದ್ದರು. ಅ 4ರ ಬೆಳಗ್ಗೆ ಅಲ್ಲಿ ಹೋಗಿ ನೋಡಿದಾಗ ಬೈಕ್ ಕಾಣಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಅವರ ಬೈಕ್ ಸಿಗಲಿಲ್ಲ. ತುರ್ತು ಕೆಲಸದ ನಿಮಿತ್ತ ಪೇಟೆಗೆ ಹೋಗಲು ಸಹ ಅವರು ಆ ದಿನ ತೊಂದರೆ ಅನುಭವಿಸಿದರು.
ಬೈಕ್ ಕಳೆದುಕೊಂಡ ಅವರು ಇದೀಗ ಗ್ರಾಮೀಣ ಭಾಗಕ್ಕೆ ಜನ ಸೇವೆಗೆ ತೆರಳಲು ಸಮಸ್ಯೆ ಅನುಭವಿಸುತ್ತಿದ್ದಾರೆ. `ತನ್ನ ಬೈಕ್ ಹುಡುಕಿಕೊಡಿ\’ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಆಸ್ಪತ್ರೆಗೆ ಆಗಮಿಸಿ ಸಿಸಿ ಕ್ಯಾಮರಾ ಪರಿಶೀಲಿಸಿದ್ದಾರೆ. ಆದರೆ, ಬೈಕ್ ಕಳ್ಳತನವಾದ ದಿನ ಕ್ಯಾಮರಾ ದೇವರ ವಿಗ್ರಹದ ಕಡೆ ನೋಡುತ್ತಿದ್ದು, ಕಳ್ಳರ ಪತ್ತೆಗೆ ನೆರವಾಗಿಲ್ಲ. ಕಳ್ಳತನಕ್ಕೂ ಮುನ್ನ ಕ್ಯಾಮರಾ ಮುಖ ತಿರುಗಿಸಿರುವ ಅನುಮಾನ ಕಾಡುತ್ತಿದೆ.
ಇನ್ನೂ ಜಿಲ್ಲಾ ಆಸ್ಪತ್ರೆ ಹೊರಭಾಗ ಬೀದಿ ದೀಪಗಳಿದ್ದರೂ ರಾತ್ರಿ ವೇಳೆ ಸರಿಯಾಗಿ ಉರಿಯುವುದಿಲ್ಲ. ಸಿಸಿ ಕ್ಯಾಮರಾ ಇದ್ದರೂ ಅದು ಎಲ್ಲಾ ಕಡೆ ನಿಗಾವಹಿಸುತ್ತಿಲ್ಲ. ಹೀಗಾಗಿ ಬೈಕ್ ಕದ್ದ ಆರೋಪಿಗಳನ್ನು ಪತ್ತೆ ಮಾಡಲು ಈವರೆಗೂ ಪೊಲೀಸರಿಂದ ಆಗಿಲ್ಲ. ಗ್ರಾಮ ಆಡಳಿತಾಧಿಕಾರಿಯ ವಾಹನ ಸಮಸ್ಯೆ ಬಗೆಹರಿದಿಲ್ಲ.