ಸಿದ್ದಾಪುರ: ಸಣ್ಣಪುಟ್ಟ ಅಡಿಕೆ ವ್ಯಾಪಾರ ಮಾಡುವ ಕೊಂಡ್ಲಿಯ ಹಾಳಾದಕಟ್ಟಾ ಶಬ್ಬಿರ ಇಬ್ರಾಹಿಂ ಶೇಖ್ ಹಣಕಾಸಿನ ಅಡಚಣೆ ಕಾರಣ ಕೈಗಡ ಪಡೆದಿದ್ದು, ಬಡ್ಡಿಸಹಿತ ಆ ಹಣ ಮರುಪಾವತಿ ಮಾಡಿದ ನಂತರವೂ ಇನ್ನಷ್ಟು ಹಣಕ್ಕಾಗಿ ಸಾಲ ನೀಡಿದವರು ಪೀಡಿಸುತ್ತಿದ್ದಾರೆ.
ಈ ಹಿನ್ನಲೆ ಮಾನಸಿಕ ಹಿಂಸೆ ನೀಡುತ್ತಿದ್ದ ಶಿರಳಗಿ ಬಿಕ್ಕಳಸೆಯ ವಿಜೇತ ಚಂದ್ರಶೇಖರ ನಾಯ್ಕ ಹಾಗೂ ಕೋಲಸಿರ್ಸಿ ಕುಣಜಿಯ ಶಿವಕುಮಾರ ಮಂಜಪ್ಪ ನಾಯ್ಕ ಎಂಬಾತರ ವಿರುದ್ಧ ಅವರು ಪೊಲೀಸ್ ದೂರು ನೀಡಿದ್ದಾರೆ. ಹಣಕಾಸಿನ ಅಡಚಣೆ ಇದ್ದ ಕಾರಣ ಶಬ್ಬಿರ ಅವರು 1.50 ಲಕ್ಷ ರೂ ಕೈಗಡ ಪಡೆದಿದ್ದರು. 9 ತಿಂಗಳ ಬಡ್ಡಿ 32 ಸಾವಿರ ರೂ ಸೇರಿ ಅಸಲನ್ನು ಸಹ ಅವರು ಪಾವತಿ ಮಾಡಿದ್ದರು. ಅದಾಗಿಯೂ ಒಟ್ಟು 2 ಲಕ್ಷ ರೂ ಬಾಕಿಯಿರುವ ಬಗ್ಗೆ ವಿಜೇತ ನಾಯ್ಕ ಹಾಗೂ ಶಿವಕುಮಾರ ನಾಯ್ಕ ದುಂಬಾಲು ಬಿದ್ದಿದ್ದರು. ಈ ಇಬ್ಬರು ಪದೇ ಪದೇ ಶಬ್ಬಿರ ಅವರ ಮನೆಗೆ ಆಗಮಿಸಿ ತೊಂದರೆ ನೀಡುತ್ತಿದ್ದರು. ಕೊನೆಗೆ `94 ಸಾವಿರ ರೂ ಬಡ್ಡಿ ಹೆಚ್ಚುವರಿಯಾಗಿ ಕೊಡಬೇಕು\’ ಎಂದು ತಾಕೀತು ಮಾಡಿದ್ದರು.
ಅಕ್ಟೊಬರ್ 3ರಂದು ಮತ್ತೆ ಶಬ್ಬಿರ್ ಅವರ ಮನೆ ಬಳಿ ಬಂದ ವಿಜೇತ ನಾಯ್ಕ ಹಾಗೂ ಶಿವಕುಮಾರ ನಾಯ್ಕ ಕೆಟ್ಟದಾಗಿ ಬೈದು `ಖಾಲಿ ಚೆಕ್‌ಗೆ ಸಹಿ ಮಾಡು\’ ಎಂದು ದಬಾಯಿಸಿದ್ದರು. `ಹಣ ಪಾವತಿಸದೇ ಇದ್ದರೆ ಸುಮ್ಮನೆ ಬಿಡುವುದಿಲ್ಲ\’ ಎಂದು ಜೀವ ಬೆದರಿಕೆಯನ್ನು ಒಡ್ಡಿದ್ದರು. ಈ ಎಲ್ಲಾ ಹಿನ್ನಲೆ ನ್ಯಾಯಾಲಯದ ಮೊರೆ ಹೋದ ಶಬ್ಬಿರ್ ಅಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.