ಶಿರಸಿ: ಮನೆಯವರಲ್ಲೆರೂ ಊಟ ಮಾಡಿ ಮಲಗಿದ ನಂತರ ಮನೆ ಕೆಲಸ ಮುಗಿಸುತ್ತಿದ್ದ ಮಲ್ಲಮ್ಮ ಅವರಿಗೆ ರಾತ್ರಿ ಬಾಗಿಲು ಬಡಿದ ಶಬ್ದ ಕೇಳಿಸಿದ್ದು, ಹೊರಗೆ ಹೋಗಿ ನೋಡಿದಾಗ ಯಾರೂ ಇರಲಿಲ್ಲ. ಇದೇ ರೀತಿ 2-3 ಬಾರಿ ಬಾಗಿಲು ಬಡಿದಾಗ ಅವರು ಹೊರಗಿನ ಲೈಟ್ ಹಾಕಿ ಮತ್ತೆ ನೋಡಿದ್ದಾರೆ. ಯಾರೂ ಇಲ್ಲ ಎಂದು ಮನೆ ಒಳ ಪ್ರವೇಶಿಸುತ್ತದ್ದ ಅವರನ್ನು ವ್ಯಕ್ತಿಯೊಬ್ಬ ಕೈ ಹಿಡಿದು ಎಳೆದಾಡಿ ಕೊನೆಗೆ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಕಿತ್ತು ಪರಾರಿಯಾಗಿದ್ದಾನೆ.
ಈ ಘಟನೆಯಿಂದ ಆಘಾತಕ್ಕೆ ಒಳಗಾದ ಬದನಗೋಡಿನ ಮಲ್ಲಮ್ಮ ನಿಂಗಪ್ಪ ಮಾದರ (46) ಅವರು ಅದೇ ಊರಿನ ಕಿಡಿಗೇಡಿ ರವಿ ಈರಪ್ಪ ಬೋವಿವಡ್ಡರ್ (25) ವಿರುದ್ಧ ಇದೀಗ ಪೊಲೀಸ್ ದೂರು ನೀಡಿದ್ದಾರೆ. ಅಕ್ಟೊಬರ್ 4ರಂದು ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ್ದರು. ನಿದ್ದೆ ಬಾರದ ಕಾರಣ ಮಲ್ಲಮ್ಮ ಮಾತ್ರ ಮಲಗಿರಲಿಲ್ಲ. ರಾತ್ರಿ 11.30ರ ಆಸುಪಾಸಿಗೆ ಅವರಿಗೆ ಬಾಗಿಲು ಬಡಿದ ಶಬ್ದ ಕೇಳಿಸಿದ್ದು, ಬಾಗಿಲು ತೆರೆದಿದ್ದಾರೆ. ಆದರೆ, ಯಾರೂ ಕಾಣಿಸಿಲ್ಲ. ಮತ್ತೆ ಪದೇ ಪದೇ ಬಾಗಿಲು ಬಡಿದ ಶಬ್ದ ಕೇಳಿಸಿದ್ದರಿಂದ ಲೈಟ್ ಹಾಕಿ ಹುಡುಕಾಡಿದ್ದು ಆಗಲೂ ಏನೂ ಕಾಣಿಸಿಲ್ಲ. ಯಾರೂ ಇಲ್ಲ ಎಂದು ಅವರು ಮನೆ ಒಳಗೆ ಪ್ರವೇಶಿಸುತ್ತಿದ್ದಾಗ ಹಿಂದಿನಿAದ ಬಂದ ರವಿ ಬೋವಿವಡ್ಡರ್ ಅವರ ಕೈ ಹಿಡಿದು ಎಳೆದಿದ್ದಾನೆ. ಯಾರು ಎಂದು ತಿರುಗಿ ನೋಡಿದ ಅವರು `ಯಾಕೆ, ಏನಾಯಿತು? ಈ ರಾತ್ರಿ ಏಕೆ ಬಾಗಿಲು ಬಡಿಯುತ್ತಿದ್ದಿ?\’ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಆತ ಕುತ್ತಿಗೆಗೆ ಕೈ ಹಾಕಿ 5 ಗ್ರಾಂ ತೂಕದ 30 ಸಾವಿರ ರೂ ಮೌಲ್ಯದ ಬಂಗಾರದ ತಾಳಿ ಕಸಿದುಕೊಂಡು ಅಲ್ಲಿಂದ ಓಡಿದ್ದಾನೆ.
ಗಾಬರಿಯಿಂದ ಮಲ್ಲಮ್ಮ ಅವರು ಕೂಗಿಕೊಂಡಾಗ ಅವರ ಪತಿ ನಿಂಗಪ್ಪ ಮಾದರ್ ಹಾಗೂ ಪವನಕುಮಾರ ಎಚ್ಚರಗೊಂಡಿದ್ದಾರೆ. ಮಲ್ಲಮ್ಮ ಅವರ ಕೂಗಿಗೆ ಪಕ್ಕದಮನೆಯ ಪಕ್ಕೀರಪ್ಪ ಶಿಳ್ಯೆಕಾತರ್ ಸಹ ಬಂದು ವಿಚಾರಣೆ ಮಾಡಿದ್ದಾರೆ. ನಂತರ ಅವರೆಲ್ಲರೂ ಸೇರಿ ಸಮಾಧಾನ ಮಾಡಿದ್ದಾರೆ. `ರವಿ ಹುಂಬ ಸ್ವಭಾವದನಾಗಿದ್ದರಿಂದ ಮತ್ತೆ ಏನಾದರೂ ಮಾಡಿದರೆ?\’ ಎಂಬ ಭಯದಲ್ಲಿ ಆ ಮನೆಯವರೆಲ್ಲರೂ ಸುಮ್ಮನಿದ್ದು, ನಂತರ ಧೈರ್ಯ ಮಾಡಿ ಪೊಲೀಸ್ ದೂರು ನೀಡಿದ್ದಾರೆ. ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.