ಯಲ್ಲಾಪುರ: ಹಿರಿಯ ನಾಗರಿಕರ ಆರೈಕೆ, ಮಾನಸಿಕ ಖಾಯಿಲೆ, ಕಣ್ಣಿನ ಬಗ್ಗೆ ಕಾಳಜಿ ಹಾಗೂ ಹೆಣ್ಣು ಮಗುವಿನ ರಕ್ಷಣೆ ಕುರಿತು ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಜನ ಜಾಗೃತಿ ಕಾರ್ಯಕ್ರಮ ನಡೆದಿದ್ದು ನ್ಯಾಯಾಧೀಶ ಬಿಜಿ ಹಳ್ಳಾಕಾಯಿ ಮಾರ್ಗದರ್ಶನ ಮಾಡಿದರು.
ವಿಶೇಷ ಉಪನ್ಯಾಸ ನೀಡಿದ ತಾಲೂಕಾ ಆಸ್ಪತ್ರೆ ವೈದ್ಯೆ ಡಾ ಸೌಮ್ಯ ಕೆ ವಿ ಮಾತನಾಡಿ `ಮಾನಸಿಕ ಕಾಯಿಲೆ ಬಂದಾಗ ವೈದ್ಯರಲ್ಲಿ ಹೋಗಲು ಅಳಕು ಬೇಡ. ಮಂತ್ರ ಮಾಟಕ್ಕೆ ಮರಳಾಗದೇ ವೈದ್ಯರನ್ನು ಕಾಣುವುದು ಉತ್ತಮ\’ ಎಂದರು. `ಮೆದುಳಿನ ಹಾರ್ಮೋನ್ ವ್ಯತ್ಯಾಸ ಮಾನಸಿಕ ರೋಗಕ್ಕೆ ಕಾರಣವಾಗಿದ್ದು, ಅಂಥವರನ್ನು ಕೀಳಾಗಿ ಕಾಣಬಾರದು\’ ಎಂದರು.
`ಮಕ್ಕಳಿಗೆ ಗೆಲುವಿನ ಜೊತೆ ಸೋಲುವುದನ್ನು ಸಹ ಕಲಿಸಬೇಕು. ಆಗ ಸೋತ ಮಕ್ಕಳು ಮಾನಸಿಕ ಒತ್ತಡಕ್ಕೆ ಸಿಲುಕುವುದು ಕಡಿಮೆಯಾಗುತ್ತದೆ. ಸಣ್ಣ ಮಕ್ಕಳು ಮೊಬೈಲ್ ರೀಲ್ಸ ನೋಡುವುದು ಸಹ ಮಾನಸಿಕ ಅಸ್ವಸ್ಥತೆಯ ಒಂದು ಭಾಗ. ಇಂಥವುಗಳಿoದ ದೈನಿಂದಿನ ಚಟುವಟಿಕೆ ಮೇಲೆ ದುಷ್ಪರಿಣಾಮ ಬೀರುವುದು\’ ಎಂದು ವಿವರಿಸಿದರು.
`ಉತ್ತಮ ಆಹಾರ ಸೇವನೆ, ಯೋಗ ಧ್ಯಾನ ಅಭ್ಯಾಸ ಹಾಗೂ ಕುಟುಂಬದವರ ಜೊತೆ ಹೆಚ್ಚು ಕಾಲ ಕಳೆದಾಗ ಸಂತೋಷದಿoದ ಬದುಕಬಹುದು. ಸಾಕು ಪ್ರಾಣಿಗಳ ಒಡನಾಟ, ಸೂರ್ಯನ ಬೆಳಕಿನ ನಡಿಗೆ, ಓದು-ಸಂಗೀತದ ಹವ್ಯಾಸಗಳಿಂದಲೂ ಮಾನಸಿಕ ರೋಗಗಳಿಂದ ಮುಕ್ತಿ ಸಾಧ್ಯ\’ ಎಂದರು.
ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ಆರ್ ಕೆ ಭಟ್ಟ `ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಳಕ್ಕೆ ಪಾಲಕರ ಬಗ್ಗೆ ಪ್ರೀತಿ ಕಡಿಮೆ ಆಗಿರುವುದೇ ಕಾರಣ\’ ಎಂದು ಪ್ರತಿಪಾದಿಸಿದರು. `ವೃದ್ಧರು ತಮ್ಮ ಜೀವಿತದ ಕೊನೆಯವರೆಗೂ ಅಲ್ಪ ಪ್ರಮಾಣದ ಆಸ್ತಿಯನ್ನು ತಮ್ಮ ಹೆಸರಿನಲ್ಲಿರಿಸಿಕೊಳ್ಳಬೇಕು. ಕೊನೆಗಾಲದಲ್ಲಿ ಆ ಆಸ್ತಿ ನೆರವಿಗೆ ಬರುತ್ತದೆ\’ ಎಂದು ಕಿವಿಮಾತು ಹೇಳಿದರು. `ಹಿರಿಯ ನಾಗರಿಕರಿಂದ ಆಸ್ತಿ ಪಡೆದ ನಂತರ ಅವರ ಫೋಷಣೆ ಮಾಡದೇ ಇದ್ದರೆ ಆ ಆಸ್ತಿಯನ್ನು ಮರಳಿ ಹಿರಿಯ ನಾಗರಿಕರಿಗೆ ನೀಡುವ ಕಾಯ್ದೆ ಜಾರಿಯಲ್ಲಿದೆ\’ ಎಂದು ಕಾನೂನು ಅರಿವು ನೀಡಿದರು.
ಅಪರ ಸರ್ಕಾರಿ ವಕೀಲ ವಿ ಟಿ ಗಾಂವ್ಕರ್ ಮಾತನಾಡಿ `ಬೀದಿಯಲ್ಲಿ ಅಲೆದಾಡುತ್ತಿರುವ ಅಸ್ವಸ್ಥರಿಗೆ ಆಸ್ಪತ್ರೆಗೆ ಸೇರಿಸಬೇಕು. ಹಿರಿಯರ ಆಸ್ತಿ ಬರೆಸಿಕೊಂಡು ಅನಾಥಾಶ್ರಮ ಸೇರಿಸುವ ಪದ್ಧತಿ ದೂರವಾಗಬೇಕು\’ ಎಂದರು. ಶಿಶು ಅಭಿವೃದ್ಧಿ ಯೊಜನಾಧಿಕಾರಿ ಶ್ರೀದೇವಿ ಪಾಟಲ, ವೈದ್ಯಾಧಿಕಾರಿ ನರೇಂದ್ರ ಪವಾರ್ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಭಟ್ಟ ಸೇರಿ ಹಲವರು ವೇದಿಕೆಯಲ್ಲಿದ್ದರು. ಸುಧಾಕರ ನಾಯಕ ನಿರ್ವಹಿಸಿದ್ದು, ಸಂಜೀವ ಹೊಸ್ಕೇರಿ ವಂದಿಸಿದರು.