ಹೊನ್ನಾವರ: ಕವಲಕ್ಕಿ ಭಾಗದಲ್ಲಿ ಎರಡು ತಿಂಗಳಿನಿ0ದ ಚಿರತೆ ಕಾಟ ಜೋರಾಗಿದೆ. ಆ ಭಾಗದ ನಾಯಿ, ಹಸುಗಳನ್ನು ವನ್ಯಜೀವಿ ಭಕ್ಷಿಸುತ್ತಿದೆ. ಹೀಗಾಗಿ ಅರಣ್ಯ ಇಲಾಖೆಯವರು ಚಿರತೆ ಸೆರೆಗೆ ಬೋನು ಇರಿಸಿದ್ದಾರೆ. ಆದರೆ, ಚಿರತೆ ಪ್ರವೇಶಕ್ಕಾಗಿ ಈವರೆಗೂ ಬೋನಿನ ಬಾಗಿಲು ತೆರೆದಿಲ್ಲ!
ಚಿರತೆ ಕಾಟ ಸಹಿಸದ ಜನ ಅರಣ್ಯ ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರು. ಚಿರತೆ ಹಿಡಿಯುವುಂತೆ ಊರಿನವರು ಪಟ್ಟು ಹಿಡಿದಿದ್ದರು. ಚಿರತೆ ಸ್ಥಳಾಂತರಕ್ಕೆ ಸಾಕಷ್ಟು ನಿಯಮ ಪಾಲಿಸಬೇಕಾಗಿದ್ದರಿಂದ ಅರಣ್ಯ ಇಲಾಖೆಯವರಿಗೂ ಈ ವಿಷಯ ತಲೆಬಿಸಿಯಾಗಿತ್ತು. ಹೀಗಾಗಿ ಜನರ ದಿಕ್ಕು ತಪ್ಪಿಸಲು ಅರಣ್ಯಾಧಿಕಾರಿಗಳು ಆ ಭಾಗದಲ್ಲಿ ಬೋನು ಇಟ್ಟರು. ಆದರೆ, ಬೋನಿನ ಕಡೆ ಚಿರತೆಯನ್ನು ಆಕರ್ಷಿಸಲು ಒಳಭಾಗದಲ್ಲಿ ನಾಯಿಯನ್ನು ಇರಿಸಿಲ್ಲ. ಬೋನಿನ ಬಾಗಿಲು ಸಹ ತೆರೆದಿಲ್ಲ!
ಇನ್ನೂ ಈ ಬೋನು ತಂದಿರಿಸಿ 15 ದಿನ ಕಳೆದಿದೆ. ಆದರೂ ಚಿರತೆ ಬಿದ್ದಿಲ್ಲ. ಹೀಗಾಗಿ ಊರಿನ ಜನ ಹತ್ತಿರ ಹೋಗಿ ನೋಡಿದ್ದಾರೆ. ಆಗ ಬೋನಿನ ಬಾಗಿಲು ತೆರೆಯದಿರುವುದು ಗೊತ್ತಾಗಿದೆ. `ಚಿರತೆಯೇ ಬೋನಿನ ಬಾಗಿಲು ತೆರೆದು ಒಳಗೆ ಬರಲಿ\’ ಎಂಬ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದ ಹಾಗಿದೆ ಎಂದು ಜನ ಆಡಿಕೊಂಡರು.