ಕಾರವಾರ: ಕಡವಾಡ ಗ್ರಾ ಪಂ ವ್ಯಾಪ್ತಿಯಲ್ಲಿ ದನಗಳ್ಳರ ಕಾಟ ಜೋರಾಗಿದೆ. ಕೆಲ ಸ್ಥಳೀಯರು ಈ ಕೃತ್ಯದಲ್ಲಿ ಭಾಗಿಯಾಗಿಯಾದ ಅನುಮಾನವಿದ್ದು, ಜಾನುವಾರುಗಳನ್ನು ಹಿಡಿದು ಬೇರೆ ಬೇರೆ ಕಡೆ ಅಕ್ರಮವಾಗಿ ಸಾಗಿಸುವವರ ವಿರುದ್ಧ ಕ್ರಮಕ್ಕೆ ಕರವೇ ನಗರ ಅಧ್ಯಕ್ಷ ರಾಜಾ ನಾಯ್ಕ ಆಗ್ರಹಿಸಿದ್ದಾರೆ.
ಈ ಕುರಿತು ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿರುವ ಅವರು `ಹಗಲು ಹೊತ್ತಿನಲ್ಲಿಯೇ ಕೆಲ ದುಷ್ಕರ್ಮಿಗಳು ಹಸುಗಳನ್ನು ಕದಿಯುತ್ತಿದ್ದಾರೆ. ಬೇರೆಯವರ ಜಾನುವಾರುಗಳಿಗೆ ಕುಣಿಕೆ ಹಾಕಿ ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಸ್ಥಳೀಯವಾಗಿ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾದವರ ಮೇಲೆ ಅನುಮಾನವಿದ್ದು, ಅವರ ವಿಚಾರಣೆ ನಡೆಸಬೇಕು\’ ಎಂದು ಆಗ್ರಹಿಸಿದ್ದಾರೆ.
`ಈ ಭಾಗದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗುಲಾಬಿ ಬಣ್ಣದ ಕಾರೊಂದು ಓಡಾಡುತ್ತಿದೆ. ಈಗಾಗಲೇ ನಾಲ್ಕು ಜಾನುವಾರು ಕಣ್ಮರೆಯಾಗಿದೆ. ಇದರೊಂದಿಗೆ ಕಡವಾಡದ ರೈತ ವಾಮನ ಕಳಸ ಅವರಿಗೆ ಸೇರಿದ ಹಸು ಕುಣಿಕೆಯಲ್ಲಿ ಸಿಕ್ಕಿಬಿದ್ದಿದ್ದು, ಆ ಹಸುವನ್ನು ಬಿಡಿಸಿಕೊಂಡು ಬರಲಾಗಿದೆ. ಪ್ರಸ್ತುತ ದುಷ್ಕರ್ಮಿಗಳನ್ನು ಸೆರೆಹಿಡಿಯಲು ಪೊಲೀಸರು ಈ ಭಾಗದಲ್ಲಿ ಗಸ್ತು ತಿರುಗಬೇಕು\’ ಎಂದವರು ಒತ್ತಾಯಿಸಿದ್ದಾರೆ.