ಕಾರವಾರ: ಉಮಳೆಜೂಗ ದ್ವೀಪದ ಜನರಿಗೆ ಸರ್ಕಾರ ಸೇತುವೆ ನಿರ್ಮಿಸಿದೆ. ಆದರೆ, ಖಾಸಗಿಯವರ ಅಡ್ಡಗಾಲಿನಿಂದ ಆ ಊರಿಗೆ ರಸ್ತೆ ನಿರ್ಮಾಣವಾಗಿಲ್ಲ. ಹೀಗಾಗಿ ದ್ವೀಪದ ಜನ ನಿತ್ಯ ಪರದಾಡುತ್ತಿದ್ದು, ಗುರುವಾರ ದೋಣಿ ಮೂಲಕ ಸ್ಮಶಾನಕ್ಕೆ ಶವ ಸಾಗಿಸಿದರು!
45 ಎಕರೆ ಪ್ರದೇಶದ ಉಮಳೆಜೂಗದಲ್ಲಿ 30ಕ್ಕೂ ಅಧಿಕ ಮನೆಗಳಿವೆ. ನಿತ್ಯ ಹಲವು ವಿದ್ಯಾರ್ಥಿಗಳು ದೋಣಿ ಮೂಲಕ ನದಿ ದಾಟಿ ಶಾಲೆಗೆ ಬರುತ್ತಾರೆ. ಅಲ್ಲಿ ವಾಸವಾಗಿರುವವರೆಲ್ಲರೂ ಕೃಷಿಕರೇ ಆಗಿದ್ದು, ತಮ್ಮ ಬೆಳೆ ಸಾಗಾಟಕ್ಕೂ ಸಮಸ್ಯೆ ಅನುಭವಿಸುತ್ತಿದ್ದಾರೆ. ಉಮಳೆಜೂಗಕ್ಕೆ ತೆರಳಲು ಮೊದಲಿನಿಂದಲೂ ರಸ್ತೆಯಿಲ್ಲ. ಸುತ್ತಲು ನೀರಿನಿಂದ ಕೂಡಿರುವ ಈ ಗ್ರಾಮಕ್ಕೆ ರಸ್ತೆ ಹಾಗೂ ಸೇತುವೆ ನಿರ್ಮಿಸಬೇಕು ಎಂದು ಜನ ಆಗ್ರಹಿಸಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ನಮಿವಾಡಾದಿಂದ ಉಮಳೆಜೂಗಕ್ಕೆ ಸೇತುವೆ ನಿರ್ಮಿಸಿತ್ತು.
ಆದರೆ, ಸೇತುವೆಗೆ ತಾಗಿ ರಸ್ತೆ ನಿರ್ಮಿಸಲು ಮುಂದಾದಾಗ ವ್ಯಕ್ತಿಯೊಬ್ಬರಿಂದ ತಕರಾರು ಅರ್ಜಿ ಸಲ್ಲಿಕೆಯಾಯಿತು. ಹೀಗಾಗಿ ನದಿ ನಡುವೆ ಸೇತುವೆಯಿದ್ದು ಅದರ ತುದಿ ಹಾಗೂ ಬುಡದಲ್ಲಿ ರಸ್ತೆ ನಿರ್ಮಾಣ ಆಗಲಿಲ್ಲ. ಇದರಿಂದ ಇಂದಿಗೂ ಆ ಊರಿನ ಜನ ಓಡಾಟಕ್ಕೆ ದೋಣಿ ಬಳಸುತ್ತಾರೆ. ಅನಾರೋಗ್ಯಕ್ಕೆ ಒಳಗಾದವರಿಗೆ ಆಸ್ಪತ್ರೆಗೆ ಸೇರಿಸಲು ತೊಂದರೆ ಅನುಭವಿಸುತ್ತಾರೆ.
ಉಮಳೆಜೂದಲ್ಲಿ ಸ್ಮಶಾನವಿಲ್ಲ. ಹೀಗಾಗಿ ಆ ಊರಿನಲ್ಲಿ ಯಾರೇ ಸಾವನಪ್ಪಿದರೂ ಕಾಳಿ ನದಿ ಆಚೆ ಇರುವ ಸಿದ್ದರಕ್ಕೆ ಶವ ತಂದು ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಅದರಂತೆ ಗುರುವಾರ ಸಹ ನದಿ ಅಪಾಯ ಸ್ಥಿತಿಯಲ್ಲಿ ಹರಿಯುತ್ತಿದ್ದರೂ ಅನಿವಾರ್ಯವಾಗಿ ದೋಣಿಯಲ್ಲಿ ಸಾಹಸ ಮಾಡಿ ಶವ ಸಾಗಿಸಿದರು.