
ದಾಂಡೇಲಿ :
ನಗರದ ವನಶ್ರಿ ನಗರದ ಅಬ್ದುಲ್ ಸತ್ತಾರ್ ಅವರು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ವಿಪರೀತ ರಕ್ತಸ್ರಾವದಿಂದ ಬಳಲುತ್ತಿದ್ದ ಹಳಿಯಾಳ ತಾಲೂಕಿನ ಸ್ವಾತಿ ಎಂಬ ಬಾಣಂತಿ ಮಹಿಳೆಗೆ ಬಿ ನೆಗೆಟಿವ್ ರಕ್ತ ಬೇಕಿತ್ತು. ಇಂದು ಮಂಗಳವಾರ ರಾತ್ರಿ 8:00 ಗಂಟೆ ಸುಮಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ತುರ್ತು ರಕ್ತದ ಅವಶ್ಯಕತೆ ಇದ್ದು, ರಕ್ತದಾನಿಗಳು ರಕ್ತ ನೀಡುವಂತೆ ಮನವಿಯನ್ನು ಮಾಡಲಾಗಿತ್ತು.
ಮನವಿ ಮಾಡಿ ಕೇವಲ ಹತ್ತೇ ಹತ್ತು ನಿಮಿಷದಲ್ಲಿ ಬಿ ನೆಗೆಟಿವ್ ರಕ್ತವನ್ನು ಹೊಂದಿರುವ ಅಬ್ದುಲ್ ಸತ್ತಾರ್ ಅವರು ತಕ್ಷಣವೇ ತನ್ನ ಮೂರು ಚಕ್ರದ ವಾಹನದ ಮೂಲಕ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ ಬಂದು ರಕ್ತವನ್ನು ನೀಡಿ, ನಿಜವಾದ ಮಾನವೀಯತೆಯನ್ನು ಮೆರೆದಿದ್ದಾರೆ. ತನ್ನ ಬದುಕೇ ದುಸ್ತರದಲ್ಲಿರುವ ಸಂದರ್ಭದಲ್ಲಿಯೂ, ಇನ್ನೊಂದು ಜೀವದ ಜೀವಕ್ಕೆ ಮಿಡಿದ ಅಬ್ದುಲ್ ಸತ್ತಾರ್ ಅವರ ಈ ಮಹತ್ಕಾರ್ಯ ನಗರದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.