
ಕಾರವಾರ: ಅರ್ಬನ್ ಬ್ಯಾಂಕಿನಲ್ಲಿ ನಡೆದ ಅವ್ಯವಹಾರಕ್ಕೆ ಸಂಬoಧಿಸಿ ದೂರು ದಾಖಲಾಗಿ ವಾರ ಕಳೆದರೂ ತನಿಖೆ ಚುರುಕುಗೊಂಡಿಲ್ಲ. ಹೀಗಾಗಿ ಬ್ಯಾಂಕಿನಲ್ಲಿ ಹಣವಿಟ್ಟ ಠೇವಣಿದಾರರು ಆತಂಕಕ್ಕೆ ಒಳಗಾಗಿದ್ದು, ಅವರಿಗೆ ಈವರೆಗೂ ಹಣ ಮರಳಿಸುವ ಆಶ್ವಾಸನೆ ಸಿಕ್ಕಿಲ್ಲ.
ಬ್ಯಾಂಕಿನಲ್ಲಿ ಅವ್ಯವಹಾರ ನಡೆದ ಬಗ್ಗೆ ಸುದ್ದಿ ಹರಡಿದ ಬೆನ್ನಲ್ಲೆ ನಿತ್ಯ ಕಚೇರಿಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಬಹುತೇಕ ಎಲ್ಲರೂ ತಾವು ಇರಿಸಿದ ಠೇವಣಿ ಹಣ ಮರಳಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಹಲವರಂತೂ `ಬಡ್ಡಿ ಬೇಡ, ಮೂಲ ಅಸಲನ್ನಾದರೂ ಕೊಡಿ\’ ಎಂದು ದುಂಬಾಲು ಬಿದ್ದಿದ್ದಾರೆ. `ಬ್ಯಾಂಕಿನ ಜಾಗ ಮಾರಿಯಾದರೂ ನಿಮ್ಮ ಹಣ ಮರಳಿಸುತ್ತೇವೆ\’ ಎಂದು ಆಡಳಿತ ಮಂಡಳಿಯವರು ಹೇಳಿದ್ದು, ಅಸಲಿಗೆ ಬ್ಯಾಂಕ್ ಇರುವ ಜಾಗ ಸಹ ಅರ್ಬನ್ ಬ್ಯಾಂಕಿಗೆ ಸೇರಿದ್ದಲ್ಲ!
ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಎನ್ ದತ್ತಾ ಸಹ ಈ ಬ್ಯಾಂಕಿನಲ್ಲಿ 4 ಲಕ್ಷ ರೂ ಹಣವಿರಿಸಿದ್ದರು. ಇದೀಗ `ಹಣ ಮರಳಿಸುವಂತೆ ಕೇಳಿದರೆ, ಬ್ಯಾಂಕ್ ನಷ್ಟದಲ್ಲಿದೆ ಎಂಬ ಉತ್ತರ ಬರುತ್ತಿದೆ\’ ಎಂದವರು ಅಳಲು ತೋಡಿಕೊಂಡರು. `ಬ್ಯಾಂಕಿನಲ್ಲಿ ನಡೆದ ಅವ್ಯವಹಾರಕ್ಕೆ ಈ ಹಿಂದಿನ ಆಡಳಿತ ಮಂಡಳಿ ಹಾಗೂ ಆಡಿಟ್ ಅಧಿಕಾರಿಗಳೇ ಕಾರಣ\’ ಎಂದವರು ದೂರಿದ್ದಾರೆ. ಜೊತೆಗೆ ಬ್ಯಾಂಕ್ ಅವ್ಯವಹಾರದ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.