
ಕುಮಟಾ: ಕೊಂಕಣ ಎಜುಕೇಶನ್ ಟ್ರಸ್ಟ್\’ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ವಿದ್ಯುನ್ಮಾನ ಯಂತ್ರ ಬಳಸಿ ಶಾಲಾ ಹಂತದ ಚುನಾವಣೆ ನಡೆಸಲಾಗಿದೆ.
ಡಿಜಿಟಲ್ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯುತ್ತಿರುವುದು ಇದೇ ಮೊದಲು. ಹೀಗಾಗಿ ಮಕ್ಕಳು ಖುಷಿ ಖುಷಿಯಾಗಿ ಚುನಾವಣೆಯ ಬಗ್ಗೆ ಅರಿತುಕೊಂಡರು. ದೇಶದ ಎಲ್ಲಡೆ ಚುನಾವಣಾ ಆಯೋಗವು ಇವಿಎಂ ಯಂತ್ರಗಳನ್ನು ಪರಿಚಯಿಸಿದೆ. ಹೀಗಾಗಿ ಚೀಟಿ ಎತ್ತಿ ಜನಪ್ರತಿನಿಧಿಗಳನ್ನು ಆರಿಸುವ ಆಯ್ಕೆ ಶಾಲೆಗಳಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ಅಲ್ಲಿ ಕೂಡ `ಡಿಜಿಟಲ್ ಇಂಡಿಯಾ\’ ಕೆಲಸ ಮಾಡಿದ್ದು, ತಂತ್ರಜ್ಞಾನ ಯುಗಕ್ಕೆ ಸರಸ್ವತಿ ವಿದ್ಯಾ ಕೇಂದ್ರ ಬದಲಾಗಿದೆ.
ಡಿಜಿಟಲ್ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಹಾಗೂ ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಚುನಾವಣಾ ಇವಿಎಂ ಮಾದರಿಯಲ್ಲಿಯೇ ಚುನಾವಣೆ ನಡೆಸುವ ಹೊಸ ಪ್ರಯತ್ನ ಇಲ್ಲಿ ನಡೆಯಿತು. ಶಾಲಾ ಸಂಸತ್ತಿನನ ಮುಖ್ಯಮಂತ್ರಿ, ಕ್ರೀಡಾ ಮಂತ್ರಿ ಹಾಗೂ ಸಾಂಸ್ಕೃತಿಕ ಮಂತ್ರಿಗಳನ್ನು ಉಳಿದ ವಿದ್ಯಾರ್ಥಿಗಳು ವಿದ್ಯುನ್ಮಾನ ಮತ ಯಂತ್ರಗಳ ಮೂಲಕ ಆಯ್ಕೆ ಮಾಡಿದರು.
ಪ್ರತಿ ಸ್ಥಾನಕ್ಕೆ ಇಬ್ಬರು ಸ್ಪರ್ಧಿಗಳಿದ್ದು, ಸ್ಪರ್ಧೆಯೂ ತೀವೃವಾಗಿತ್ತು. 266 ಮತ ಚಲಾವಣೆಯಾದವು. ಮತಯಂತ್ರದಲ್ಲಿ ಅಭ್ಯರ್ಥಿಗಳ ಫೋಟೋ ಜೊತೆ ಹೆಸರಿದ್ದು, ಚಿಹ್ನೆಗಳು ಇದ್ದವು. ಎಲ್ಲಾ ಚುನಾವಣೆಯಂತೆ ಇಲ್ಲಿ ಸಹ ಮತದಾನ ಮಾಡಿದವರ ಬೆರಳಿಗೆ ಶಾಯಿ ಬಡಿಯಲಾಯಿತು. ದಾಖಲೆಗಳನ್ನು ಪರಿಶೀಲಿಸಿಯೇ ಮತದಾನಕ್ಕೆ ಅವಕಾಶ ನೀಡಲಾಯಿತು.
ಚುನಾವಣಾ ಪ್ರಕ್ರಿಯೆಗಳಗಳನ್ನು ಗಮನಿಸಲು ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ್ ಶೆಟ್ಟಿ ಆಗಮಿಸಿದ್ದರು. ಶಿಕ್ಷಕರು ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿದರು.