
ಯಲ್ಲಾಪುರ: ಉಡುಪಿಯಿಂದ ಗಂಗಾವತಿಗೆ ಹೋಗುತ್ತಿದ್ದ ಬಸ್ ಡೊಮಗೇರಿ ತಿರುವಿನ ಬಳಿ ಅಪಘಾತವಾಗಿದೆ. ಇದರಿಂದ ಬಸ್ಸಿನಲ್ಲಿದ್ದ 12 ಜನ ಗಾಯಗೊಂಡಿದ್ದಾರೆ.
ಜೂ 19ರ ಬೆಳಗ್ಗೆ 3.30ಕ್ಕೆ ಈ ಅಪಘಾತ ನಡೆದಿದ್ದು, ಬಸ್ ಚಾಲಕ ಶಿವಮೊಗ್ಗದ ಪ್ರದೀಪ ಜಿ ನಿದ್ರೆಯ ಮಂಪರಿನಲ್ಲಿ ಬಸ್ ಓಡಿಸಿರುವುದು ಅಪಘಾತಕ್ಕೆ ಕಾರಣ. ರಸ್ತೆ ಬದಿ ನಿಂತಿದ್ದ ಲಾರಿಗೆ ಈತ ಬಸ್ಸು ಗುದ್ದಿದ್ದರಿಂದ ಬಸ್ಸಿನ ಒಳಗಿದ್ದವರೆಲ್ಲ ಒಮ್ಮೆಗೆ ಮುಗುಚಿ ಬಿದ್ದು, ಮುಖ-ಮೂತಿಗೆ ಗಾಯ ಮಾಡಿಕೊಂಡಿದ್ದಾರೆ. ಕೆಲವರ ಕೈ-ಕಾಲುಗಳಿಗೂ ಗಾಯವಾಗಿದೆ. ಗಾಯಗೊಂಡ ಎಲ್ಲರೂ ನರಳುತ್ತ ರಸ್ತೆ ಪಕ್ಕದಲ್ಲಿಯೇ ರಾತ್ರಿ ಕಳೆದಿದ್ದು, ಪೊಲೀಸರು ಮುತುವರ್ಜಿವಹಿಸಿ 4ಕ್ಕೂ ಅಧಿಕ ಆಂಬುಲೈನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ರಸ್ತೆ ಬದಿ ನಿಂತಿದ್ದ ಲಾರಿ
ಕೇರಳ ಕಣ್ಣೂರಿನ ಮಹಮದ್ ರಮ್ಮದ್ ಡಿ ಅವರ ಜವಾಬ್ದಾರಿಯಲ್ಲಿದ್ದು, `ಪಾರ್ಕಿಂಗ್ ಲೈಟ್ ಹಾಕದೇ ಲಾರಿ ನಿಲ್ಲಿಸಿದ್ದರಿಂದ ಈ ಅವಘಡ ನಡೆದಿದೆ\’ ಎಂದು ಬಸ್ ಚಾಲಕ ಹೇಳಿದ್ದಾನೆ. ಬಸ್ ಕಂಡೆಕ್ಟರ್ ಚಂದ್ರಪ್ಪ ಕಪಲೆಪ್ಪ ಅಗಳವಾಡಿ, ಪ್ರಯಾಣಿಕರಾದ ರಾಯಚೂರಿನ ಸುನಿಲ ಚಿನ್ನಪ್ಪ ಯಲಬುರ್ಗಾದ ಮಲ್ಲಯ್ಯ ಹಿರೇಮಠ, ಬಾಗಲಕೋಟೆಯ ಬಸಯ್ಯ ದೇಸಾಯಿಮಠ, ಗಂಗಾವತಿಯ ಲಕ್ಷಿ, ರಾಯಚೂರಿನ ರಾಮಕೃಷ್ಣ ಕೂರ, ಕೊಪ್ಪಳದ ಚಂದ್ರಪ್ಪ ರಾಜೂರು, ಶಿವಾನಂದ ದೊಡ್ಮನಿ, ಉಡುಪಿಯ ಕಿರಣ ಕೋಲೂರು, ರಾಜೇಶ್ವರಿ ಮಂಜುನಾಥ್ ಗಾಯಗೊಂಡವರಾಗಿದ್ದಾರೆ.