
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಸರ್ಕಾರದಿಂದ 61 ವೈದ್ಯರ ನೇಮಕಾತಿ ನಡೆದಿದ್ದು, ಅದರಲ್ಲಿ 24 ವೈದ್ಯರು ಯಾರಿಗೂ ಹೇಳದೇ ಕೆಲಸ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನೀರಜ್ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದಾಗ ಸಚಿವರೇ ಸುಸ್ತಾದರು!
`ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದಗಳಿಗೆ ಸರ್ಕಾರಿ ಕೋಟದಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದ 61 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅದರಲ್ಲಿ 24 ವೈದ್ಯರು ಹೇಳದೇ ಕೇಳದೇ ಕೆಲಸ ಬಿಟ್ಟು ಹೋಗಿದ್ದಾರೆ ಎಂದು ಆರೋಗ್ಯಾಧಿಕಾರಿ ಸಭೆಯಲ್ಲಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಕಾಳು ವೈದ್ಯ, `ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವ ವಿದ್ಯಾರ್ಥಿಗೆ ಸರಕಾರವು ಸುಮಾರು 2 ಕೋಟಿ ರೂ ಅಧಿಕ ಮೊತ್ತವನ್ನು ವೆಚ್ಚ ಮಾಡುತ್ತಿದ್ದು, ವೈದ್ಯಕೀಯ ಪದವಿ ಪಡೆದ ಇಂತಹ ವೈದ್ಯರು ಕಡ್ಡಾಯ ಸರ್ಕಾರಿ ಸೇವೆ ಸಲ್ಲಿಸಬೇಕು ಎಂಬ ನಿಯಮವಿದೆ. ಅದರಂತೆ ಕೆಲಸಕ್ಕೆ ಸೇರಿ, ಉತ್ತಮ ವೇತನ ನೀಡಿದರೂ ಕಾರಣ ನೀಡದೇ ಕೆಲಸ ಬಿಟ್ಟು ಹೋಗಿರುವುದು ಸರಿಯಲ್ಲ. ಅಂಥ ವೈದ್ಯರ ವಿರುದ್ಧ ಕಾನೂನು ಸಲಹೆ ಪಡೆದು ಪ್ರಕರಣ ದಾಖಲಿಸಬೇಕು\’ ಎಂದು ಸೂಚಿಸಿದರು.