
ಕುಮಟಾ: ಕೊಂಕಣ ಎಜುಕೇಶನ್ ಟ್ರಸ್ಟಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಾಧನೆಗೆ ಪುರಸ್ಕಾರ ಹಾಗೂ ಸಾಧನೆಗೆ ಮಾರ್ಗದರ್ಶನ ಮಾಡಿದ ಗುರುವೃಂದಕ್ಕೆ ಅಭಿನಂದಿಸುವ `ಅಭಿಪ್ರೇರಣಾ ಮಹೋತ್ಸವ\’ವನ್ನು ಕುಂದಾಪುರದ ಹಟ್ಟಿಅಂಗಡಿಯ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆ ಹಟ್ಟಿಯಂಗಡಿಯ ಪ್ರಾಂಶುಪಾಲ ಶರಣ ಕುಮಾರ ಉದ್ಗಾಟಿಸಿದರು.
ನಂತರ ಮಾತನಾಡಿದ ಅವರು `ಜಗತ್ತಿನಲ್ಲಿ ಅಸಮರ್ಥರು ಎನ್ನುವವರು ಯಾರು ಇಲ್ಲ. ಎಲ್ಲರೂ ಸಮರ್ಥರೇ, ಆದರೆ ಅವರು ತಮಗೆ ಲಭಿಸುವ ಅವಕಾಶಗಳನ್ನು ಬಳಸಿಕೊಳ್ಳಲು ಕಲಿಯಬೇಕು. ಹೀಗಾದಾಗ ಮಾತ್ರ ಪ್ರತಿಯೊಬ್ಬರೂ ಸಮರ್ಥರಾಗಲು ಸಾಧ್ಯ\’ ಎಂದು ಹೇಳಿದರು. `ಬದುಕಿನಲ್ಲಿ ಅವಕಾಶಗಳು ಸಿಗುವುದು ತೀರಾ ಕಡಿಮೆ. ಸಿಕ್ಕಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲು ಕಲಿಯಬೇಕು. ಹಾಗಾದಾಗ ಮಾತ್ರ ಸಾಧನೆವಾಗುತ್ತದೆ. ಸಾಧಕರಾಗಲು ಎಲ್ಲರಿಗೂ ಸಾಧ್ಯವಿದೆ. ಆದರೆ ನಿರಂತರ ಪರಿಶ್ರಮ, ಅವಕಾಶಗಳ ಸದ್ಬಳಕೆ, ಜಡತ್ವವನ್ನು ತೊರೆದು ಕಾರ್ಯಮಾಡುವಿಕೆಯ ಅವಶ್ಯಕತೆ ಇರುತ್ತದೆ\’ ಎಂದರು.
ಮುಖ್ಯ ಅತಿಥಿಗಳಾಗಿದ್ದ ಡಯಟ್ ಪ್ರಾಂಶುಪಾಲ ಎನ್. ಜಿ ನಾಯಕ ಮಾತನಾಡಿ `ಉತ್ತರ ಕನ್ನಡದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ ಅತ್ಯುತ್ತಮ ಸಂಸ್ಥೆಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಸಹಸ್ರಾರು ವಿದ್ಯಾರ್ಥಿಗಳಿಗೆ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿರುವ ಸಂಸ್ಥೆ ಇದಾಗಿದೆ\’ ಎಂದರು.