
ಯಲ್ಲಾಪುರ: ಕರ್ನಾಟಕ ಬ್ಯಾಂಕ್\’ನ `ಗೋಲ್ಡ್ ಅಪ್ರೆoಜರ್\’ ಎಂದು ಸುಳ್ಳು ಹೇಳಿ ತಿರುಗಾಡುತ್ತಿದ್ದ ರವೀಂದ್ರ ನಗರದ ತುಳಸಿದಾಸ ಕುರ್ಡೇಕರ ಎಂಬಾತ ನಂದೂಳ್ಳಿಯ ಭಾಸ್ಕರ್ ನಾಯ್ಕ ಎಂಬಾತರಿಗೆ ಇದೇ ರೀತಿ ನಂಬಿಸಿ 1.5 ಲಕ್ಷ ರೂ ಪಡೆದು ನಕಲಿ ಬಂಗಾರ ನೀಡಿ ಮೋಸ ಮಾಡಿದ್ದಲ್ಲದೇ, ಅವರ ಮನೆಯಲ್ಲಿದ್ದ 5.5 ಲಕ್ಷ ರೂ ಮೌಲ್ಯದ ಅಡಿಕೆಯನ್ನು ಪಡೆದು ಪರಾರಿಯಾಗಿದ್ದಾನೆ.
ಈ ಎಲ್ಲಾ ವಿದ್ಯಮಾನಗಳಿಂದ ಒಟ್ಟು 799870ರೂ ಕಳೆದುಕೊಂಡು ಅನ್ಯಾಯಕ್ಕೆ ಒಳಗಾದ ಭಾಸ್ಕರ್ ನಾಯ್ಕ ಇದೀಗ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅನಗತ್ಯವಾಗಿ ಇಲ್ಲಿ `ಕರ್ನಾಟಕ ಬ್ಯಾಂಕ್\’ ಹೆಸರು ತಳಕು ಹಾಕಿಕೊಂಡಿದೆ.
ಘಟನೆ ವಿವರ:
ನಂದೂಳ್ಳಿ ಬೆಳಖಂಡದ ಭಾಸ್ಕರ್ ನಾಯ್ಕ ವ್ಯಾಪಾರದ ಜೊತೆ ವೆಲ್ಡಿಂಗ್ ಕೆಲಸ ಮಾಡಿ ಬದುಕು ಕಟ್ಟಿಕೊಂಡವರು. ಇವರನ್ನು ಭೇಟಿ ಮಾಡಿದ ತುಳಸಿದಾಸ ಕುರ್ಡೇಕರ ಎಂಬಾತ ತನ್ನನ್ನು ತಾನು ಕರ್ನಾಟಕ ಬ್ಯಾಂಕಿನ `ಗೋಲ್ಡ್ ಅಪ್ರೆoಜರ್\’ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ಕರ್ನಾಟಕ ಬ್ಯಾಂಕಿನಲ್ಲಿ ರಾಜೇಶ್ ಮಹಾಲೆ ಎಂಬಾತರು ಅಡವಿಟ್ಟ ಬಂಗಾರ ಇದ್ದು, ಅದನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿದ್ದಾನೆ. ಅದರಂತೆ, ರಾಜೇಶ ಅವರ ಜೊತೆ ಭಾಸ್ಕರನನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ಭಾಸ್ಕರನಿಂದ 99870ರೂ ತುಂಬಿಸಿ ಅಲ್ಲಿದ್ದ ಒಡವೆಗಳನ್ನು ಬಿಡಿಸಿದ್ದಾನೆ. ಬ್ಯಾಂಕಿನಲ್ಲಿ ಅಡವಿದ್ದ ಒಡವೆಗಳನ್ನು ತುಳಸಿದಾಸ ಕುರ್ಡೇಕರ್ ಪರಿಶೀಲಿಸಿ ಪ್ರಮಾಣಪತ್ರ ನೀಡಿದ್ದಾಗಿದ್ದು, ಈ ಒಡವೆ ಕರಗಿಸಿ 916 ಗುರುತಿನ ನಾಲ್ಕು ಬಳೆ ಮಾಡಿಕೊಡುವುದಾಗಿಯೂ ಭಾಸ್ಕರರನ್ನು ಆತನೇ ನಂಬಿಸಿದ್ದಾನೆ. ಇದಕ್ಕೆ ಒಪ್ಪಿದ ಭಾಸ್ಕರ್ ಮತ್ತೆ 1.5 ಲಕ್ಷ ರೂ ನೀಡಿ, ಉಳಿದ 50 ಸಾವಿರ ರೂ ನಂತರ ನೀಡುವುದಾಗಿ ಹೇಳಿದ್ದು, ಕೆಲ ದಿನಗಳ ನಂತರ ತುಳಸಿದಾಸ್ 4 ಬಳೆಗಳನ್ನು ಭಾಸ್ಕರನಿಗೆ ನೀಡಿ ಹಣ ಕೇಳಿದ್ದಾನೆ.
ಆಗ, ಭಾಸ್ಕರ್ ನಾಯ್ಕ `ತನ್ನಲ್ಲಿ 5.5 ಲಕ್ಷದ ಅಡಿಕೆಗಳಿದ್ದು, ಅದನ್ನು ಮಾರಾಟ ಮಾಡಿ ಹಣ ನೀಡುವೆ\’ ಎಂದಾಗ ಇದಕ್ಕೆ ಪ್ರತಿಯಾಗಿ `ತಾನೇ ಉತ್ತಮ ಬೆಲೆಗೆ ಅಡಿಕೆ ಮಾರಿ ಕೊಡುತ್ತೇನೆ\’ ಎಂದು ತುಳಸಿದಾಸ್ ತಿಳಿಸಿ ಅಡಿಕೆಯನ್ನು ಅಲ್ಲಿಂದ ಕೊಂಡೊಯ್ದು ಅದರ ಹಣವನ್ನು ಸಹ ಕೊಟ್ಟಿಲ್ಲ. ಈ ನಡುವೆ ತುಳಸಿದಾಸ್ ನೀಡಿದ 4 ಬಳೆಗಳನ್ನು ಇನ್ನೊಬ್ಬರ ಬಳಿ ಪರಿಶೀಲಿಸಿದಾಗ ಅದು ಸಹ ನಕಲಿಯಾಗಿದ್ದು, 916 ಎಂದು ಅಂಟು ಹಾಕಿ ಹಿಡಿಸಿರುವುದು ಬೆಳಕಿಗೆ ಬಂದಿದೆ. ಮೋಸ ಹೋದ ಬಗ್ಗೆ ಅರಿತ ಭಾಸ್ಕರ್ ನಾಯ್ಕ ಈ ಬಗ್ಗೆ ಪ್ರಶ್ನಿಸಲು ರವೀಂದ್ರ ನಗರದಲ್ಲಿರುವ ಮನೆಗೆ ಹೋದಾಗ ಅಲ್ಲಿದ್ದ ತುಳಸಿದಾಸ ಕುರ್ಡೇಕರ್ ಹಾಗೂ ಅವರ ಕುಟುಂಬದವರಾದ ರೇಷಾ ತುಳಸಿದಾಸ, ಸಚಿನ್ ಕುರ್ಡೇಕರ್, ಸೀಮಾ ಕುರ್ಡೇಕರ ರವೀಂದ್ರ ನಗರ ಭಾಸ್ಕರನಿಗೆ ನಿಂದಿಸಿ, ಜೀವ ಬೆದರಿಕೆ ಒಡ್ಡಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಇನ್ನೂ “ಆರೋಪಿ ತುಳಸಿದಾಸ ಕುರ್ಡೇಕರ್ ತಮ್ಮ ಬ್ಯಾಂಕ್ `ಗೋಲ್ಡ್ ಅಪ್ರೆoಜರ್\’ ಅಲ್ಲ. ವರ್ಷದ ಹಿಂದೆ ಅವರನ್ನು ಕೆಲಸದಿಂದ ಕೈ ಬಿಡಲಾಗಿದೆ\’\’ ಎಂದು ಕರ್ನಾಟಕ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.