
ಅಂಕೋಲಾ: ದುಡಿದು ಸಂಪಾದನೆ ಮಾಡುವ ಬದಲು ಮಂಗಳಮುಖಿ ವೇಷ ಧರಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವ್ಯಕ್ತಿಗೆ ಅಂಕೋಲಾದ ಜನ ಚಳಿ ಬಿಡಿಸಿದ್ದಾರೆ.
ಮೀಸೆ ಮತ್ತು ಗಡ್ಡ ಬೋಳಿಸಿಕೊಂಡ ಪುರುಷನೊಬ್ಬ ಮೂಗುತಿ ಹಾಕಿಕೊಂಡು ಪಟ್ಟಣದ ಹಲವಡೆ ಓಡಾಡುತ್ತಿದ್ದ. ಸೀರೆ ಉಟ್ಟಿದ್ದ ಈತನ ನೋಡಿ ಕೆಲವರು ಹಣ ಕೊಡುತ್ತಿದ್ದರು. ಹಣ ಕೊಡದೇ ಇದ್ದವರನ್ನು ಆತ ನಿಂದಿಸಿ, ಶಾಪ ಹಾಕುತ್ತಿದ್ದ. ಕೆಸಿ ರಸ್ತೆಗೆ ಬಂದಾಗ ಆತನ ಗೃಹಚಾರ ಕೆಟ್ಟಿತ್ತು. ಕೀಟಲೆ ಮಾಡುವ ಹುಡುಗರ ಬಳಿ ಆತ ಸಿಕ್ಕಿಬಿದ್ದಾಗ ಬಣ್ಣ ಬಯಲಾಯಿತು. ಪಚ್ಚು ಮತ್ತು ಮಾದೇವ ಎಂಬಾತರು ಆತನ ಮೇಲೆ ಮೊದಲ ಅನುಮಾನ ವ್ಯಕ್ತಪಡಿಸಿದ್ದರು.
ಆ ಹುಡುಗರಿಗೆ ಪರಿಚಯವಿದ್ದ ಮಂಗಳಮುಖಿಯ ನೆರವಿನಿಂದ ಆತನನ್ನು ಅವರು ಮಾತನಾಡಿಸಿದ್ದರು. `ಅವ ನಮ್ಮ ಗುಂಪಿನವನಲ್ಲ\’ ಎಂದು ನೈಜ ಮಂಗಳಮುಖಿ ಹೇಳಿದಾಗ ಇಡೀ ಊರಿನವರು ಸೇರಿ ತರಾಠೆಗೆ ತೆಗೆದುಕೊಂಡರು. ನಂತರ ಎಲ್ಲರೂ ಸೇರಿ `ಧರ್ಮದೇಟು\’ ನೀಡಿದಾಗ ಆತ ಸತ್ಯ ಒಪ್ಪಿಕೊಂಡು ಕ್ಷಮೆ ಕೇಳಿದ್ದಾನೆ.