
ಹೊನ್ನಾವರದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಮಾರುತಿ ಗುರೂಜಿ ಭಾಗವಹಿಸಿದರು
ಹೊನ್ನಾವರ: ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ಹಾಗೂ ಪಿ. ಯು. ಕಾಲೇಜಿನಲ್ಲಿ \’ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ\’ ಎಂಬ ಧ್ಯೇಯವಾಕ್ಯದೊಂದಿಗೆ ಯೋಗ ದಿನಾಚರಣೆ ನಡೆಯಿತು.
ಕ್ಷೇತ್ರದ ಧರ್ಮಾಧಿಕಾರಿ ಮಾರುತಿ ಗುರೂಜಿ ಭಾಗವಹಿಸಿ ಯೋಗದ ಮಹತ್ವದ ಬಗ್ಗೆ ವಿವರಿಸಿದರು. \’ಇಡೀ ವಿಶ್ವಕ್ಕೆ ಭಾರತದ ಅಮೂಲ್ಯ ಕೊಡುಗೆ ಯೋಗ. ಮನಸ್ಸಿನ ಚಿತ್ತ ಚಾಂಚಲ್ಯವನ್ನು ನಿಗ್ರಹ ಮಾಡುವ ಅತ್ಯಮೂಲ್ಯ ಸಾಧನ ಈ ಯೋಗ\’ ಎಂದು ಮಾರುತಿ ಗುರೂಜಿ ಹೇಳಿದರು. `ನಿತ್ಯ ಪಠಣ ಮಾಡುವ ಮಂತ್ರೋಚ್ಛಾರಗಳಲ್ಲಿ ಕ್ಷಣ ಕ್ಷಣದ ಉಸಿರಾಟದ ಅನುಲೋಮ, ವಿಲೋಮ, ಸ್ತಂಬನದ ಪ್ರಕ್ರಿಯೆಗಳಲ್ಲಿ ಹಾಸುಹೊಕ್ಕಾಗಿದೆ. ಯೋಗ ಮನುಷ್ಯನ ಆರೋಗ್ಯವನ್ನು ಸುಸ್ಥಿರವಾಗಿಡುವಲ್ಲಿ ಸಹಕಾರಿ. ಯೋಗದ ನಿತ್ಯ ಅನುಷ್ಠಾನವೇ ಮಹಾಯಜ್ಞ. ಇದರಿಂದ ಆರೋಗ್ಯ ಹಾಗೂ ಆಧ್ಯಾತ್ಮಿಕ ಜಾಗೃತಿ ಸಾಧ್ಯ\’ ಎಂದರು. ನಂತರ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿ ಮಂಜುನಾಥ ಎಮ್ ಎನ್, ಶಾಲೆಯ ಆಡಳಿತ ನಿರ್ದೇಶಕ ಜಿ. ಟಿ. ಹೆಗಡೆ, ಶಾಲೆಯ ಪ್ರಾಂಶುಪಾಲ ಎಸ್. ಜೊನ್ ಬೊಸ್ಕೊ ಇದ್ದರು.

ಯಲ್ಲಾಪುರ: ಯೋಗ ದಿನಾಚರಣೆ ಅಂಗವಾಗಿ ಬಿಸಗೋಡು ಪ್ರೌಢಶಾಲೆಯಲ್ಲಿ ಸಾಮೂಹಿಕ `ಸೂರ್ಯ ನಮಸ್ಕಾರ\’ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೈಹಿಕ ಶಿತಲೀಕರಣ ಹಾಗೂ ನಿಂತು ಮಾಡುವ ಆಸನಗಳ ಬಗ್ಗೆ ಶಿಕ್ಷಕರು ಪಾಠ ಮಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ವಿನೋದ್ ನಾಯಕ ವಿವಿಧ ಆಸನಗಳ ಬಗ್ಗೆ ತಿಳಿಸಿದರು. ಪದ್ಮಾಸನ, ವಜ್ರಾಸನ, ಮರ್ಜಾಲಾಸನ, ಶಶಾಂಕಾಸನ, ಸೇತುಬಂಧಾಸನ, ತಾಡಾಸನ, ಚಕ್ರಾಸನ, ಶಿರ್ಶಾಸನದ ಬಗ್ಗೆ ಹೇಳಿ ಅವುಗಳ ಮಹತ್ವ ವಿವಿರಿಸಿದರು. ಶಿಕ್ಷಕರಾದ ಶ್ರೀಧರ್ ಹೆಗಡೆ, ವೀ ಎಮ್ ಭಟ್, ಸದಾನಂದ ದಬಗಾರ, ರವಿಕುಮಾರ್ ಕೆಎನ್, ಶೈಲಾ ಎಂ ಭಟ್ ಉಪಸ್ಥಿತರಿದ್ದು ತಾವು ಕೂಡ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ಸುಗೊಳಿಸಿದರು.

ಯಲ್ಲಾಪುರ: ಇಲ್ಲಿನ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಶಿಕ್ಷಕ ಚಂದ್ರಶೇಖರ್ ಯೋಗದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಆಸನ, ಪ್ರಾಣಾಯಾಮ, ಧ್ಯಾನ ಸಂಕಲ್ಪಗಳನ್ನು ಅವರು ಮಕ್ಕಳಿಗೆ ಹೇಳಿಕೊಟ್ಟರು. 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗ ಮಾಡಿದರು. `ಜಗತ್ತಿಗೆ ಯೋಗವನ್ನು ನೀಡಿದ ದೇಶ ಭಾರತ. ಇದು ಇಲ್ಲಿನ ಪುರಾತನ ಸಂಸ್ಕಾರ ಮತ್ತು ಶಕ್ತಿಯನ್ನು ಸಾರಿದೆ\’ ಎಂದು ಶಾಲಾ ಮುಖ್ಯಾಧ್ಯಾಪಕ ಫಾದರ್ ರೆಮಂಡ್ ಫರ್ನಾಂಡಿಸ್ ಭಿಪ್ರಾಯಪಟ್ಟರು. ಧ್ಯಾನ ಮತ್ತು ಸಂಕಲ್ಪದ ಕುರಿತಾಗಿ ವೆಂಕಟ್ರಮಣ ಭಟ್ಟ ಮಾತನಾಡಿದರು. ನೆಲ್ಸನ್ ಗೋನ್ಸಾಲ್ವಿಸ್ ಯೋಗ ಶ್ಲೋಕ ಹೇಳಿದರು. ಪ್ರಾಣಾಯಾಮದ ಕುರಿತು ಎಂ ರಾಜಶೇಖರ್ ಮಾತನಾಡಿದರು.