
ಅಂಕೋಲಾ: ಹಿಲ್ಲೂರಿನ ಬಿಲ್ಲನಬೈಲ್\’ನಲ್ಲಿ ಇಬ್ಬರ ಕೊಲೆ ನಡೆದಿರುವ ಬಗ್ಗೆ ಪೊಲೀಸರಿಗೆ ಫೋನ್ ಬಂದಿದ್ದು, ತಕ್ಷಣ ಪೊಲೀಸರು ಅಲ್ಲಿಗೆ ದೌಡಾಯಿಸಿದ್ದರು. ಶ್ವಾನದಳ, ಬೆರಳಚ್ಚು ತಜ್ಞರು ಸಹ ಆಗಮಿಸುತ್ತಿದ್ದರು. ಆದರೆ, ಮುಂದೆ ತೆರಳಿದ್ದ ಪೊಲೀಸರಿಗೆ ಅಲ್ಲಿ ಶವವೂ ಸಿಗಲಿಲ್ಲ. ಆರೋಪಿಗಳು ಇರಲಿಲ್ಲ!
ಮಂಜುನಾಥ ಬೊಮ್ಮಯ್ಯ ನಾಯಕ ಎಂಬಾತ `ತನ್ನ ಮನೆಯಲ್ಲಿ ಕೊಲೆಯಾಗಿದೆ\’ ಎಂದು ಪೊಲೀಸರಿಗೆ ಫೋನ್ ಮಾಡಿದ್ದ. `ಕೊಲೆ ಮಾಡಿದವರು ಸಹ ಇಲ್ಲೇ ಇದ್ದಾರೆ, ಅವರನ್ನು ಬಂಧಿಸಿ\’ ಎಂದು ಗೋಗರೆದಿದ್ದ. ಇದರಿಂದ ಗಾಬರಿಗೊಂಡ ಪೊಲೀಸರು ತಕ್ಷಣ ಅಲ್ಲಿಗೆ ತಂಡಸಹಿತ ತೆರಳಿದ್ದು, ಶವದ ಹುಡುಕಾಟ ನಡೆಸಿದರು. ಶವವೂ ಇಲ್ಲ, ಆರೋಪಿಗಳು ಇಲ್ಲ ಎಂದು ತಿಳಿದು ನಂತರ ಹಾಗೇ ಮರಳಿದರು.
ಮಂಜುನಾಥ ಬೊಮ್ಮಯ್ಯ ನಾಯಕ 112ಗೆ ಕರೆ ಮಾಡಿದ್ದು, ಅದು ಕಾರವಾರ ಕಚೇರಿಗೆ ಸಂಪರ್ಕವಾಗಿತ್ತು. ಅಲ್ಲಿಂದ ಅಂಕೋಲಾ ಪೊಲೀಸರಿಗೆ ವೈರ್ಲೆಸ್ ಮೂಲಕ `ಹೈ ಅಲರ್ಟ\’ ಮೆಸೆಜ್ ಬಂದಿತ್ತು. ಇದರಿಂದ ಜಾಗೃತರಾದ ಪಿಎಸೈ ಉದ್ಧಪ್ಪ ಧರೆಪ್ಪನವರ್, ಎಎಸೈ ಲಲಿತಾ ರಜಪೂತ್ ಹಾಗೂ ಸಿಬ್ಬಂದಿ ಪ್ರವೀಣ ಪೂಜಾರ 32ಕಿಮೀ ದೂರದ ಹಿಲ್ಲೂರಿಗೆ ತೆರಳಿದ್ದರು. ಫೋನ್ ಬಂದ 25 ನಿಮಿಷದ ಒಳಗೆ ಅವರು ಸ್ಥಳದಲ್ಲಿದ್ದರು.
ನಂತರ ಅಲ್ಲಿಗೆ ನಗುತ್ತ ಬಂದ ಮಂಜುನಾಥ ನಾಯಕ `ತಾನೇ ಫೋನ್ ಮಾಡಿದ್ದು. ನಾನೇ ಕೊಲೆ ಮಾಡಿದ್ದು\’ ಎಂದು ಹೇಳಿದ್ದಾನೆ. ಜೊತೆಗೆ `ನನ್ನ ಪತ್ನಿ ಹಾಗೂ ಮಗಳ ಶವ ಸಿಕ್ಕಿತೆ?\’ ಎಂದು ಪ್ರಶ್ನಿಸಿದ್ದಾನೆ. `ಇನ್ನೂ ಕೊಲೆ ನಡೆದಿಲ್ಲ. ಮುಂದೆ ಕೊಲೆ ಆಗುವುದಿದೆ. ಅದಕ್ಕಾಗಿ ಮುಂಚಿತವಾಗಿ ತಿಳಿಸಿದೆ\’ ಎನ್ನುತ್ತ ಹಲ್ಲು ಕಿರಿದಿದ್ದಾನೆ. ಇದರಿಂದ ಸಿಟ್ಟಾದ ಪೊಲೀಸರು ಆತನಿಗೆ ಎರಡು ಬಾರಿ ಲಾಠಿಯ ಋಚಿ ತೋರಿಸಿ, ಮೇಲಧಿಕಾರಿಗಳಿಗೆ ಫೋಟೋಸಹಿತ ವಿವರ ನೀಡಿದ್ದಾರೆ.
ಇನ್ನೂ, ಕೊಲೆಯಾಗಿದೆ ಎಂಬ ವದಂತಿ ಕೇಳಿ ನೂರಾರು ಜನ ಜಮಾಯಿಸಿದ್ದರು. `ಕಳೆದ ಒಂದು ವರ್ಷದಿಂದ ಈತ ಇದೇ ರೀತಿ ಕಿತಾಪತಿ ಮಾಡುತ್ತಿದ್ದಾನೆ. ಆತನ ಪತ್ನಿ-ಮಕ್ಕಳು ಬೇರೆ ಕಡೆ ವಾಸವಾಗಿದ್ದಾರೆ\’ ಎಂದು ಊರಿನವರು ಹೇಳಿದ್ದಾರೆ.