
ಯಲ್ಲಾಪುರ: ತಳಮಟ್ಟದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದ ಸಬಗೇರಿಯ ಗಣಪತಿ ಭಟ್ಟ ಜಡ್ಡಿ ಅವರು ಇಹಲೋಕದ ಯಾತ್ರೆ ಮುಗಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿಯಾಗಿದ್ದ ಅವರು ಬಿಜೆಪಿ ಪಕ್ಷಕ್ಕಾಗಿ ದುಡಿದಿದ್ದರು. `ಸಂಘಟನೆಯೇ ಶಕ್ತಿ\’ ಎಂದು ನಂಬಿ ಅನೇಕ ವರ್ಷಗಳಿಂದ ಕಾರ್ತಿಕ ಉತ್ಸವದ ಮೂಲಕ ಜನರನ್ನು ಒಗ್ಗೂಡಿಸುತ್ತಿದ್ದರು. ಉತ್ತಮ ಕೃಷಿಕರಾಗಿ, ಪುರೋಹಿತರಾಗಿ ಹಲವರ ಮನ ಗೆದ್ದಿದ್ದರು. ಅಯೋಧ್ಯೆ ಹಾಗೂ ರಾಮಮಂದಿರದ ಬಗ್ಗೆ ಎಲ್ಲರಲ್ಲಿಯೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. 91 ವರ್ಷಗಳ ಕಾಲ ಸಾತ್ವಿಕ ಬದುಕು ನಡೆಸಿದ ಅವರು ಭಾನುವಾರ ಈ ಲೋಕವನ್ನು ತ್ಯಜಿಸಿದ್ದಾರೆ. `ಗಣಪತಿ ಅವರು ಅತ್ಯಂತ ಸರಳ ವ್ಯಕ್ತಿಯಾಗಿದ್ದು, ನಮಗೆಲ್ಲ ಪ್ರೇರಣೆಯಾಗಿದ್ದರು\’ ಎಂದು ಸಿ ಡಿ ಭಟ್ಟ ಅವರು ಹೇಳಿದರು.
ಗಣಪತಿ ಭಟ್ಟ ಅವರ ನಿಧನದ ವಿಷಯ ತಿಳಿದ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಬಿಜೆಪಿಗರಾದ ಸೋಮೇಶ್ವರ ನಾಯ್ಕ, ವಿನೋದ ತಳ್ಳೆಕರ್, ರವಿ ದೇವಾಡಿಗ ಮೊದಲಾದವರು ಅವರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಗಣಪತಿ ಭಟ್ಟ ಜಡ್ಡಿ ಅವರ ನಿಧನಕ್ಕೆ ಅನೇಕರು ಸಂತಾಪ ಸಲ್ಲಿಸಿ, ಅವರ ಆಪ್ತರಿಗೆ ಸಾಂತ್ವಾನ ಹೇಳಿದ್ದಾರೆ.