
ಹೊನ್ನಾವರ: ಮಾವಿನಕುರ್ವ ಮತ್ತು ಜಲವಳ್ಳಿ ಗ್ರಾ ಪಂ ವ್ಯಾಪ್ತಿಯ ಹೊಸಾಡಪಾರ್ ಅರಣ್ಯದಲ್ಲಿ ಅಕ್ರಮವಾಗಿ ಗುಡ್ಡ ಅಗೆದು ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ದೂರು ನೀಡಿದ ಶ್ರೀಧರ ಶೇಟ್ ಎಂಬಾತರ ಮೇಲೆ ಗ್ರಾ ಪಂ ಸದಸ್ಯ ವೆಂಕಟರಮಣ ಮೇಸ್ತ ಎಂಬಾತರು ಹಲ್ಲೆ ನಡೆಸಿದ್ದಾರೆ.
ಹಲ್ಲೆ ಮಾಡಿದ ಗ್ರಾ ಪಂ ಸದಸ್ಯ ವೆಂಕಟರಮಣ ಮೇಸ್ತ ಸ್ಥಳೀಯ ಅರಣ್ಯ ಸಮಿತಿ ಅಧ್ಯಕ್ಷರು ಹೌದು. `ಅರಣ್ಯ ಜಾಗದಲ್ಲಿನ ಮಣ್ಣು ತೆಗೆದ ಕಾರಣ ತಮ್ಮ ಮನೆಗೆ ನೀರು ನುಗ್ಗುತ್ತಿದೆ\’ ಎಂದು ಶ್ರೀಧರ ಶೇಟ್ ದೂರಿದ್ದರು. ಆದರೆ, ಅರಣ್ಯ ಇಲಾಖೆಯವರು ಕ್ರಮ ಜರುಗಿಸಿರಲಿಲ್ಲ. ಹೀಗಾಗಿ ನೂರಾರು ಟಿಪ್ಪರ್ ಮಣ್ಣು ಸಾಗಾಟ ಆಗುವುದನ್ನು ಶ್ರೀಧರ್ ಶೇಟ್ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಇದರಿಂದ ಸಿಟ್ಟಾದ ವೆಂಕಟ್ರಮಣ ಮೇಸ್ತ ಕಬ್ಬಿಣದ ರಾಡಿನಿಂದ ಶ್ರೀಧರ ಶೇಟ್ ಮೇಲೆ ಹಲ್ಲೆ ನಡೆಸಿದ್ದು, ತಮಗೆ ರಕ್ಷಣೆ ಅಗತ್ಯ ಎಂದು ಶ್ರೀಧರ ಶೇಟ್ ಪೊಲೀಸರ ಮೊರೆ ಹೋಗಿದ್ದಾರೆ.