
ಜಿಲ್ಲಾಕೇಂದ್ರ ಕಾರವಾರದಲ್ಲಿನ ಎಂ ಜಿ ರಸ್ತೆಯಲ್ಲಿ ಪೊಲೀಸರಿಗಾಗಿ ವಸತಿ ನಿಲಯ ನಿರ್ಮಿಸಿ ಒಂದುವರೆ ವರ್ಷ ಕಳೆದಿದೆ. ಆದರೆ, ಈವರೆಗೂ ಅಲ್ಲಿನ ಮನೆಗಳನ್ನು ಅರ್ಹರಿಗೆ ವಿತರಿಸಿಲ್ಲ. ಇದೀಗ ಪ್ರತಿ ಮನೆಗೆ 10 ಸಾವಿರ ರೂ ಲೆಕ್ಕದಲ್ಲಿ ನೀರು ಹಾಗೂ ವಿದ್ಯುತ್ ಬಿಲ್ ಬಂದಿದ್ದು, ಹೊಸಮನೆಗೆ ಪ್ರವೇಶಿಸಲಿರುವ ಪೊಲೀಸರಿಗೆ ಅದು ಹೊರೆಯಾಗಲಿದೆ!
ಒಪ್ಪಂದದ ಪ್ರಕಾರ ಗುತ್ತಿಗೆದಾರರು ಕಟ್ಟಡ ನಿರ್ಮಾಣ ಕೆಲಸ ಮುಗಿಸಿ ಅದನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಆದರೆ, ಆಗ ಚುನಾವಣೆ ನೀತಿಸಂಹಿತೆ ನೆಪವೊಡ್ಡಿ ಅದನ್ನು ಅರ್ಹರಿಗೆ ಹಸ್ತಾಂತರಿಸಿರಲಿಲ್ಲ. ಅದಾದ ನಂತರ ಈ ಹಸ್ತಾಂತರ ಪ್ರಕ್ರಿಯೆಗೆ ಹಿರಿಯ ಅಧಿಕಾರಿಗಳಿಗೆ ಪುರಸೋತು ಸಿಕ್ಕಿಲ್ಲ. ಹೀಗಾಗಿ ಆ ಕಟ್ಟಡ ಹೊಸದಾಗಿದ್ದರೂ ಹೊರಗಿನಿಂದ ಪಾಳು ಬಂಗಲೆ ರೀತಿ ಕಾಣುತ್ತಿದೆ. ಇಲ್ಲಿ ಎರಡು ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ಪೊಲೀಸ್ ಕುಟುಂಬಗಳಿಗೆ ಆಶ್ರಯ ಕಲ್ಪಿಸುವುದು ವಸತಿಗೃಹದ ಮುಖ್ಯ ಉದ್ದೇಶ. ಈ ಕಟ್ಟಡದಲ್ಲಿರುವ ಪ್ರತಿ ಮನೆಯೂ ಡಬಲ್ ಬೆಡ್ ರೂಂ ಹೊಂದಿದೆ. ಪ್ರತ್ಯೇಕ ಅಡುಗೆಮನೆ, ಹಾಲ್, ಸ್ನಾನ ಹಾಗೂ ಶೌಚಾಲಯಗಳಿವೆ. ಪೊಲೀಸರ ಮೂಲ ವೇತನದಲ್ಲಿ ಪ್ರತಿ ತಿಂಗಳು ಶೇ 10ರಷ್ಟು ಕಡಿತಗೊಳಿಸಿ ಈ ಮನೆಗಳನ್ನು ಅವರಿಗೆ ನೀಡುವ ಪ್ರಸ್ತಾಪವಿದೆ. ಈ ರೀತಿ ಮಾಡಿದರೆ ಪೊಲೀಸರ ವೇತನದಲ್ಲಿ ಕಡಿತಗೊಳಿಸುವ ಹಣ ಸರ್ಕಾರಿ ಬೊಕ್ಕಸಕ್ಕಾದರೂ ಬರುತ್ತಿತ್ತು. ಪ್ರತಿ ಪೊಲೀಸ್ ಸಿಬ್ಬಂದಿಯಿoದ ಪ್ರತಿ ತಿಂಗಳು ಕನಿಷ್ಟ 4-5 ಸಾವಿರ ರೂ ಬಾಡಿಗೆ ಅಂದರೂ ಇಲಾಖೆಗೆ 1 ಲಕ್ಷ ರೂಗಳಿಗಿಂತ ಅಧಿಕ ವಾರ್ಷಿಕ ಆದಾಯ ಪ್ರತಿ ಮನೆಯಿಂದ ಬರುತ್ತಿತ್ತು. ಹೊಸದಾಗಿ ನಿರ್ಮಿಸಿದ ಮನೆಯನ್ನು ಖಾಲಿ ಬಿಟ್ಟಿರುವುದರಿಂದ ಆ ಹಣ ಸಹ ವಸೂಲಿಯಾಗದೇ ಪೊಲೀಸ್ ಇಲಾಖೆಗೆ ನಷ್ಟವಾಗಿದೆ. ಜೊತೆಗೆ ಈವರೆಗೂ ಮನೆ ಹಸ್ತಾಂತರ ಆಗದ ಕಾರಣ ಅರ್ಹ ಪೊಲೀಸರಿಗೆ ಅನ್ಯಾಯವಾಗಿದೆ.
ಪ್ರಸ್ತುತ 10 ಸಾವಿರದ ಲೆಕ್ಕದಲ್ಲಿ ವಿದ್ಯುತ್ ಹಾಗೂ ನೀರಿನ ಬಿಲ್ ಬಂದಿರುವುದು ಸಹ ಅಲ್ಲಿ ಪ್ರವೇಶಿಸಲಿರುವ ಪೊಲೀಸ್ ಕುಟುಂಬಕ್ಕೆ ಆಘಾತ ತಂದಿದೆ. `ದೊಡ್ಡ ದೊಡ್ಡ ಅಧಿಕಾರಿಗಳೆಲ್ಲ ಬಂಗಲೆಯಲ್ಲಿರುತ್ತಾರೆ. ನಮ್ಮಂಥ ಸಿಬ್ಬಂದಿಗೆ ಬಾಡಿಗೆಮನೆಯೂ ಗತಿ ಇಲ್ಲ. ಹೊಸ ಕಟ್ಟಡ ಹಾಳಾಗುತ್ತಿದ್ದರೂ ಅದನ್ನು ನಾವು ಕೇಳುವ ಹಾಗಿಲ್ಲ. ಯಾರಾದರೂ ಪ್ರಶ್ನೆ ಮಾಡಿದರೆ ಅವರಿಗೆ ಶಿಕ್ಷೆಯಾಗುತ್ತದೆ. ಕಣ್ಣಮುಂದೆ ಮನೆ ಇದ್ದರೂ ಅದರ ಬಳಕೆಗೆ ಹಕ್ಕಿಲ್ಲ\’ ಎಂದು ಪೊಲೀಸ್ ಮನೆಯ ಆಕಾಂಕ್ಷಿಗಳು ಅಸಹಾಯಕತೆ ಹೊರಹಾಕಿದರು. `ಪೊಲೀಸ್ ವರಿಷ್ಠಾಧಿಕಾರಿಗಳಿಗಾದರೂ ನಮ್ಮ ಸಮಸ್ಯೆ ಅರ್ಥವಾದರೆ ಸಾಕು\’ ಎನ್ನುತ್ತ ಕೆಲ ಪೊಲೀಸರು ಅಳಲು ತೋಡಿಕೊಂಡರು.
– ಅಚ್ಯುತಕುಮಾರ ಯಲ್ಲಾಪುರ