
ಶಿರಸಿ: ಶಿವಾಜಿಚೌಕದ ಬಸವರಾಜ ನಾಗಣ್ಣನವರ್ ಎಂಬಾತರು ಹುಬ್ಬಳ್ಳಿಯ ವರದಪ್ಪ ಲೋಕರ್ ಎಂಬಾತರಿಂದ ಭೂಮಿ ಖರೀದಿಸಿದ್ದು, ವರದಪ್ಪ ಅವರ ನಿಧನದ ನಂತರ ಅವರ ಮಕ್ಕಳು ಭೂಮಿಯ ಹಕ್ಕು ಬಿಟ್ಟುಕೊಟ್ಟಿಲ್ಲ.
ಬಸವರಾಜ ನಾಗಣ್ಣವರ್ ಅವರು ಶಿರಸಿಯಲ್ಲಿ ಸಿದ್ದಲಿಂಗೇಶ್ವರ ಖಾನಾವಳಿ ನಡೆಸುತ್ತಿದ್ದಾರೆ. ಅವರು ತಮ್ಮ ಸ್ನೇಹಿತರಾಗಿದ್ದ ಹುಬ್ಬಳ್ಳಿಯ ವರದಪ್ಪ ಅವರಿಗೆ 1.5 ಲಕ್ಷ ರೂ ಪಾವತಿಸಿ, ಎರಡು ದಶಕದ ಹಿಂದೆ ಭೂಮಿ ಖರೀದಿಸಿದ್ದರು. ರಾಜೀವ ಗೃಹ ನಿರ್ಮಾಣ ಸಂಘದವರ ಹಕ್ಕಿದ್ದ ಭೂಮಿ ಇದಾಗಿದ್ದು, \’15 ವರ್ಷಗಳ ಕಾಲ ಈ ಜಾಗ ಪರಾಧೀನ ಮಾಡಬಾರದು\’ ಎಂಬ ಷರತ್ತು ಇರುವ ಕಾರಣ ಅದನ್ನು ತಮ್ಮ ಹೆಸರಿಗೆ ಮಾಡಿಕೊಂಡಿರಲಿಲ್ಲ. ಹೀಗಿರುವಾಗ ವರದಪ್ಪ ಲೋಕರ್ 1996ರಲ್ಲಿ ನಿಧನರಾಗಿದ್ದು, ಅಂದಿನಿಂದಲೂ ಅವರ ಮಕ್ಕಳ ಬಳಿ ಬಸವರಾಜ್, ತಾವು ಖರೀದಿಸಿಸ ಭೂಮಿಗಾಗಿ ಅಂಗಲಾಚುತ್ತಿದ್ದರು.
ಭೂಮಿಯ ಹಕ್ಕು ನೀಡಲು ವರದಪ್ಪ ಲೋಕರ್ ಅವರ ಮಕ್ಕಳಾದ ಈಶ್ವರ ಲೋಕೂರು, ಪ್ರಕಾಶ ಲೋಕೂರು, ಜಯರಾಮ ಲೋಕೂರು ಹಾಗೂ ಶಂಕರ ಲೋಕೂರು ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರ ಪ್ರಕಾರ ಬಸವರಾಜ್ 7.50 ಲಕ್ಷ ರೂ ಹೆಚ್ಚುವರಿಯಾಗಿ ನೀಡಿದ್ದರು. ಅದಾಗಿಯೂ ಅವರು ಭೂಮಿಯನ್ನು ಹೆಸರಿಗೆ ಮಾಡಿಕೊಡಲು ನಿರಾಕರಿಸಿದ್ದರು.
ಈ ಬಗ್ಗೆ ಗಟ್ಟಿಯಾಗಿ ಪ್ರಶ್ನಿಸಿದಾಗ ನಾಲ್ವರು ಸೇರಿ ಹಣವನ್ನೇ ಮರಳಿಸುವುದಾಗಿ ತಿಳಿಸಿದ್ದು, ಅವರು ನೀಡಿದ ಚೆಕ್ ಸಹ ಅಸ್ತಿತ್ವದಲ್ಲಿರಲಿಲ್ಲ. ಇದರಿಂದ ಮೋಸ ಹೋದ ಬಸವರಾಜ್ ನಾಗಣ್ಣನವರ್ ಇದೀಗ ತಮಗೆ ನ್ಯಾಯ ಒದಗಿಸುವಂತೆ ಕೋರಿ ಪೊಲೀಸ್ ದೂರು ನೀಡಿದ್ದಾರೆ.