
Exif_JPEG_420
ಯಲ್ಲಾಪುರ: ನೂತನ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಮಳೆ ನೀರಿನಿಂದ ಸೋರುತ್ತಿದೆ. ಇದರಿಂದ ನೆಲ ತೇವಗೊಂಡಿದ್ದು, ಜೋರು ಮಳೆ ಆದಾಗಲೆಲ್ಲ ಮಕ್ಕಳು ಕೊಡೆ ಅಡ್ಡಹಿಡಿದು ಹಿಡಿದು ಪಾಠ ಕೇಳುವುದು ಅನಿವಾರ್ಯ!
ಈ ಶಾಲೆಯಲ್ಲಿ ಮೂರು ಕೊಠಡಿಗಳಿದ್ದು, ಒಂದು ಕೊಠಡಿ ಮಣ್ಣಿನ ಗೋಡೆಯದ್ದಾಗಿದೆ. ಗೋಡೆ ಪೂರ್ತಿ ಬಿರುಕು ಬಿಟ್ಟಿದ್ದರಿಂದ ಅಲ್ಲಿ ಮಕ್ಕಳಿಗೆ ಪ್ರವೇಶವಿಲ್ಲ. ಇನ್ನೆರಡು ಕೊಠಡಿಗಳಲ್ಲಿ ತಲಾ ಒಬ್ಬರು ಶಿಕ್ಷರು ಪಾಠ ಮಾಡುತ್ತಿದ್ದಾರೆ. ಅದರಲ್ಲಿ ಒಂದು ಕೊಠಡಿಯ ಮೇಲ್ಬಾಗ ಸೋರುತ್ತಿದೆ. ಮಳೆ ನೀರು ಸೋರುವ ತಳಭಾಗದಲ್ಲಿ ಬಕೇಟ್ ಇರಿಸಿ, ನೀರು ಎಲ್ಲಡೆ ಹರಿಯದಂತೆ ಮಾಡಲಾಗಿದೆ. ಅದಾಗಿಯೂ ಮಳೆ ಜೋರಾದಾಗ ನೆಲ ಒದ್ದೆಯಾಗುತ್ತದೆ. ಜೊತೆಗೆ ಆ ಕಡೆ – ಈ ಕಡೆ ನೀರು ಸಿಡಿಯುತ್ತಿದ್ದು, ಮಳೆಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗದೇ ಮಕ್ಕಳು ಪರದಾಡುತ್ತಿದ್ದಾರೆ.

ಕೆಲ ಮಕ್ಕಳು ಬೆಂಚಿನ ಮೇಲೆ ಕುಳಿತಿದ್ದರೆ, ಕೆಲವರು ನೆಲದ ಮೇಲೆ ಚಾಪೆ ಹಾಸಿ ಕೂರುತ್ತಾರೆ. ಹೀಗಾಗಿ ಗಾಳಿ ಮಳೆ ಜೋರಾದಾಗ ಸಿಡಿಯುವ ನೀರಿನಿಂದ ಮಕ್ಕಳಿಗೆ ಚಳಿ ಜ್ವರ ತಪ್ಪಿದ್ದಲ್ಲ. 16 ವರ್ಷಗಳ ಹಿಂದೆ ನಿರ್ಮಾಣವಾದ ಈ ಕಟ್ಟಡದಲ್ಲಿ ಪ್ರಸ್ತುತ 20 ಮಕ್ಕಳಿದ್ದಾರೆ. ಮಳೆ ನೀರು ಸೋರುವ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿಯಿದ್ದು, ಸ್ಥಳ ಪರಿಶೀಲನೆ ನಡೆಸಿ ಸುಮ್ಮನಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಸಮಸ್ಯೆಯಿದ್ದು, ಮುಂದಿನ ವರ್ಷದ ಮಳೆಗೆ ಸಮಸ್ಯೆ ಇನ್ನಷ್ಟು ಉಲ್ಬಣವಾಗುವ ಸಾಧ್ಯತೆಗಳಿದೆ.