
ಹೊನ್ನಾವರ: `ಬಿ ಎಸ್ ಡಬ್ಲು ಅರೇಅಂಗಡಿ ಕಾಲೇಜು ಅಭಿವೃದ್ಧಿಗೆ ಆಡಳಿತ ಮಂಡಳಿ ಅಧ್ಯಕ್ಷ ಡಿ.ಡಿ ಮೆಚ್ಚಣ್ಣನವರ್ ತೊಡಕಾಗಿದ್ದಾರೆ\’ ಎಂದು ಅದೇ ಕಾಲೇಜಿನ ಪ್ರಾಚಾರ್ಯ ಅರುಣ ನಾಯ್ಕ ದೂರಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಅಧ್ಯಕ್ಷರು ಪ್ರಾಚಾರ್ಯರ ಸಹಿ ನಕಲು ಮಾಡಿ, ಕಾಲೇಜು ಸ್ಥಳಾಂತರ ವಿಷಯವಾಗಿ ವಿಶ್ವ ವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ನನ್ನ ಸಹಿ ಪೋರ್ಜರಿ ಆಗಿರುವ ಬಗ್ಗೆ ದೂರು ನೀಡಿದ್ದೇನೆ\’ ಎಂದರು. `ಜಿಲ್ಲೆಯ ಪ್ರಥಮ ಸಮಾಜಕಾರ್ಯ ಶಿಕ್ಷಣ ಪದವಿ ಕಾಲೇಜು ಆಗಿರುವ ತಾಲೂಕಿನ ಅರೇಅಂಗಡಿಯ ಸಿರಿಬಿಎಸ್ಡಬ್ಲ್ಯೂ ಕಾಲೇಜನ್ನು ಆಡಳಿತ ಮಂಡಳಿ ಬೇರೆ ಕಡೆ ಸ್ಥಳಾಂತರಿಸುವ ಹುನ್ನಾರ ನಡೆಸಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ\’ ಎಂದರು.
`ಈ ಕಾಲೇಜು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಕೊರೊನಾ ಅವಧಿಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗಿದ್ದು, ಅದೇ ನೆಪವೊಡ್ಡಿ ಕಾಲೇಜು ಸ್ಥಳಾಂತರ ಕೆಲಸ ನಡೆದಿದೆ\’ ಎಂದು ದೂರಿದರು. `ಈ ವಿಷಯದಲ್ಲಿ ಧಾರವಾಡ ವಿಶ್ವ ವಿದ್ಯಾಲಯ ಸಹ ಲೋಪ ಎಸಗಿದೆ. ಈ ಬಗ್ಗೆ ಪ್ರಶ್ನಿಸಿದ ನನಗೆ ಜೀವ ಬೆದರಿಕೆ ಬಂದಿದೆ\’ ಎಂದು ಆತಂಕ ವ್ಯಕ್ತಪಡಿಸಿದರು.