
ಯಲ್ಲಾಪುರ: ಗಾಂಧಿ ಕುಟಿರದಲ್ಲಿಮಂಗಳವಾರ ನಡೆದ `ಜನಸ್ಪಂದನಾ ಸಭೆ\’ಯಲ್ಲಿ ಭಾಗವಹಿಸಿದ್ದ ಜನ ಶಾಸಕರ ಎದುರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅಲ್ಲಿಯೇ ಇದ್ದ ಅಧಿಕಾರಿಗಳನ್ನು ಕರೆದ ಶಾಸಕ ಶಿವರಾಮ ಹೆಬ್ಬಾರ್ ಸಮಸ್ಯೆಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅದರಲ್ಲಿಯೂ ಮುಖ್ಯವಾಗಿ `ಗೃಹಲಕ್ಷ್ಮೀ\’ ಯೋಜನೆಯ ಹಣಬಾರದ ಮಹಿಳೆಯರು ತಮ್ಮ ಅಹವಾಲು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಮ ಹೆಬ್ಬಾರ್ `ಸರಕಾರದ ಎಲ್ಲ ಯೋಜನೆಗಳು ಫಲಾನುಭವಿಗಳಿಗೆ ತಲುಪಬೇಕು. ತಮ್ಮ ತಮ್ಮ ಪ್ರದೇಶದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಫಲಾನುಭವಿಗಳು ಇದ್ದರೆ ಅವರಿಗೆ ಯೋಜನೆ ತಲುಪಿಸಬೇಕಾದದ್ದು ಅಧಿಕಾರಿಗಳ ಜವಾಬ್ದಾರಿ\’ ಎಂದರು.

`ಆನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 10 ಪರಿಶಿಷ್ಟ ಪಂಗಡದವರ ಮನೆಯ ಮೇಲೆಯೇ ವಿದ್ಯತ್ ತಂತಿ ಹಾದು ಹೋಗಿದ್ದು ಲೈನ್ ಬದಲಿಸಿಕೊಡಬೇಕು\’ ಎಂದು ಕುಸುಮಾ ಸಿದ್ದಿ ಪಟ್ಟುಹಿಡಿದರು. `ಸವಣಗೇರಿಗೆ ಮಂಚಿಕೇರಿಯಿoದ ವಿದ್ಯುತ್ ಪೂರೈಕೆಯಾಗುತ್ತಿರುವ ಕಾರಣ ವಿದ್ಯುತ್ ಕಡತ ಸಾಮಾನ್ಯವಾಗಿದೆ. ಸವಣಗೇರಿಗೆ ಪಟ್ಟಣದಿಂದಲೇ ವಿದ್ಯುತ್ ಪೂರೈಸಿ\’ ಎಂದು ಸವಣಗೇರಿಯ ಗಣೇಶ ಹೆಗಡೆ ದುಂಬಾಲು ಬಿದ್ದರು. `ಮಳಲಗಾವ, ಉಪಳೇಶ್ವರ, ಜಂಬೇಸಾಲ, ಹುತ್ಕಂಡದಿಂದ ಪ್ರತಿನಿತ್ಯ 80ಕ್ಕೂ ಅಧಿಕ ಮಕ್ಕಳು ಯಲ್ಲಾಪುರಕ್ಕೆ ಬರುತ್ತಾರೆ. ಅವರಿಗೆ ಸರಿಯಾದ ಬಸ್ ಇಲ್ಲ\’ ಎಂದು ದ್ಯಾಮಣ್ಣ ಭೋವಿವಡ್ಡರ್ ಸಭೆಯ ಗಮನಕ್ಕೆ ತಂದರು.
ಲೋಕೋಪಯೋಗಿ, ಜಲ ಜೀವನ ಮಿಶನ್ ಹಾಗೂ ಜಿಲ್ಲಾ ಪಂಚಾಯತದ ಕಾಮಗಾರಿಗಳನ್ನು ಗುತ್ತಿಗೆ ಪಡೆದವರು ಒಂದೆರಡು ವರ್ಷವಾದರೂ ಕಾಮಗಾರಿ ಆರಂಭಿಸಿಲ್ಲ ಅಧಿಕಾರಿಗಳೇ ಅಸಹಾಯಕತೆ ತೋಡಿಕೊಂಡರು. `ಅಂಥ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ\’ ಎಂದು ಶಾಸಕರು ಸೂಚಿಸಿದರು.
`ಪಟ್ಟಣ ವ್ಯಾಪ್ತಿಯಲ್ಲಿ ಕೃಷಿಭೂಮಿ ಮಾಯವಾಗುತ್ತಿದ್ದು, ಎಲ್ಲವೂ ಲೇಔಟ್ ಆಗುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯತಗೆ ಅರಿವಿರಬೇಕು\’ ಎಂದು ಪ ಪಂ ಅಧಿಕಾರಿಗಳಿಗೆ ಶಿವರಾಮ ಹೆಬ್ಬಾರ್ ಕಿವಿಮಾತು ಹೇಳಿದರು. `ಭೂಕುಸಿತ ಸಂಭವಿಸಿದ ಕಳಚೆಗೆ ವಿದ್ಯುತ್ ಕಲ್ಪಿಸುವ ಬಗ್ಗೆ ಉಮೇಶ ಭಾಗ್ವತ್ ಆಗ್ರಹಿಸಿದರು. `ಕೆಇಬಿಯವರು ಗ್ರಾಮಾಂತರ ಭಾಗವನ್ನು ನಿರ್ಲಕ್ಷಿಸುತ್ತಿದ್ದಾರೆ\’ ಎಂದು ನಿರಂಜನ ಹೆಗಡೆ ದೂರಿದರು.