ಯಲ್ಲಾಪುರ: `ಪಟ್ಟಣ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಅದಕ್ಕೆ ಅನುಗುಣವಾಗಿ ಸೂಕ್ತ ಮಾರುಕಟ್ಟೆ ಇಲ್ಲ. ಅದರಲ್ಲಿಯೂ ಮುಖ್ಯವಾಗಿ ಪಟ್ಟಣಕ್ಕೆ ಇನ್ನೂ ಎರಡು ಮೀನು ಮಾರುಕಟ್ಟೆ ಅಗತ್ಯ\’ ಎಂದು ಪಟ್ಟಣ ಪಂಚಾಯತ ಸದಸ್ಯ ಸತೀಶ ನಾಯ್ಕ ಹೇಳಿದ್ದಾರೆ. ಮತ್ತೆ ಎರಡು ಮೀನು ಮಾರುಕಟ್ಟೆ ನಿರ್ಮಿಸುವುದರಿಂದ ವ್ಯಾಪಾರ-ವಹಿವಾಟು ಹೆಚ್ಚಳವಾಗಿ ಪಂಚಾಯತ ಆದಾಯ ಹೆಚ್ಚಾಗಲಿದೆ ಎಂಬುದು ಅವರ ಆರ್ಥಿಕ ಲೆಕ್ಕಾಚಾರ.
ಇದೀಗ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮೀನು ಮಾರಾಟ ನಡೆಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಉತ್ತಮ ಮಾರುಕಟ್ಟೆ ಒದಗಿಸಿದಲ್ಲಿ ಎಲ್ಲರಿಗೂ ಅನುಕೂಲ\’ ಎಂದು ಅವರು ಹೇಳಿದ್ದಾರೆ. `ಮಂಜುನಾಥ ನಗರದ ಬಳಿಯಿರುವ ಹೆಬ್ಬಾರ್ ನಗರದಲ್ಲಿ 2 ಸಾವಿರಕ್ಕೂ ಅಧಿಕ ಜನ ವಾಸಿಸಲಿದ್ದಾರೆ. ಆ ಭಾಗದಲ್ಲಿಯೇ ಮೀನು ಮಾರುಕಟ್ಟೆ ನಿರ್ಮಿಸಿದರೆ ಸ್ವಚ್ಛತೆ ಕಾಪಾಡಲು ಸಹಕಾರಿ\’ ಎಂದಿದ್ದಾರೆ.