ಯಲ್ಲಾಪುರ: ಪ್ರತಿ ವರ್ಷ ಮಳೆಗಾಲದಲ್ಲಿ ಮಾಗೋಡು ರಸ್ತೆಯ ಕಾಳಿಮನೆ ಪ್ರದೇಶ ಜಲಾವೃತವಾಗುತ್ತದೆ. ಇಲ್ಲಿನ ರಸ್ತೆಯ ಮೇಲೆ ನೀರು ಹರಿಯುವುದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ.
ಪ್ರಸಿದ್ಧ ಮಾಗೋಡು ಜಲಪಾತ, ಕವಡಿಕೆರೆ, ಜೇನುಕಲ್ಲು ಗುಡ್ಡ ಹಾಗೂ ಗಂಟೆ ಗಣಪತಿ ದೇವಾಲಯವಿರುವ ಈ ರಸ್ತೆಯಲ್ಲಿ ನಿತ್ಯ ಸಾವಿರ ಸಂಖ್ಯೆಯ ವಾಹನಗಳು ಓಡಾಡುತ್ತವೆ. ಶನಿವಾರ – ಭಾನುವಾರ ಬಂದಾಗ ವಾಹನ ಓಡಾಟದ ಸಂಖ್ಯೆ ದುಪ್ಪಟ್ಟಾಗುತ್ತದೆ. ಸ್ವಲ್ಪ ಪ್ರಮಾಣದಲ್ಲಿ ಮಳೆ ಬಂದರೂ ರಸ್ತೆ ಪೂರ್ತಿಯಾಗಿ ರಾಡಿಯಾಗುತ್ತಿದ್ದು, ಈ ಬಗ್ಗೆ ಯಾರೂ ಗಮನಹರಿಸಿಲ್ಲ ಎಂಬುದು ಗ್ರಾಮದವರ ದೂರು.
ವ್ಯಕ್ತಿಯೊಬ್ಬರು ಇಲ್ಲಿದ್ದ ಕಾಲುವೆ ಅತಿಕ್ರಮಿಸಿದ ಕಾರಣ ಈ ಅವಾಂತರ ಸೃಷ್ಟಿಯಾಗಿದೆ ಎನ್ನುತ್ತಾರೆ ಸ್ಥಳೀಯರು. ರಸ್ತೆ ಮೇಲೆ ನೀರು ನಿಂತಿರುವುದರಿoದ ವಾಹನಗಳು ಇಲ್ಲಿ ಸಾಲುಗಟ್ಟಿ ನಿಲ್ಲುವುದು ಅನಿವಾರ್ಯ. ಇದರಿಂದ ಒಮ್ಮೆಗೆ ಟ್ರಾಫಿಕ್ ಸಮಸ್ಯೆ ಕಾಡುತ್ತಿದೆ. ಜೊತೆಗೆ ಮಳೆಯಲ್ಲಿ ಕಾದು, ಮಳೆ ನಿಂತ ಮೇಲೆ ಸಂಚರಿಸಬೇಕಾದ ಪರಿಸ್ಥಿತಿಯಲ್ಲಿ ಜನರಿದ್ದಾರೆ. ನೀರು ಹರಿದು ಹೋಗಲು ಸ್ಥಳೀಯ ಆಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.