ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜಲಪಾತಗಳು ಮೈ ತುಂಬಿ ಹರಿಯುತ್ತಿದೆ. ಆದರೆ, ಬಹುತೇಕ ಕಡೆ ಜಲಪಾತಗಳ ಪ್ರವೇಶಕ್ಕೆ ತಡೆ ಒಡ್ಡಲಾಗಿದೆ.
ಜಲಪಾತದ ಬುಡದಲ್ಲಿ ಹಾಗೂ ರಸ್ತೆಗಳಲ್ಲಿ ಗುಡ್ಡ ಕುಸಿತದ ಲಕ್ಷಣಗಳಿರುವುದರಿಂದ ಈ ಮುನ್ನಚ್ಚರಿಕೆ ಕೈಗೊಳ್ಳಲಾಗಿದೆ. ಕಳೆದ ಕೆಲ ವರ್ಷಗಳ ವಿದ್ಯಮಾನಗಳನ್ನು ಗಮನಿಸಿದರೆ, ಪ್ರವಾಸಿಗರ ಹುಚ್ಚಾಟದಿಂದ ಮಳೆಗಾಲದಲ್ಲಿ ಅನೇಕ ಅವಾಂತರಗಳು ನಡೆದಿದ್ದವು. ಈ ಹಿನ್ನಲೆ ಪ್ರವಾಸಿಗರ ಮೇಲೆ ನಿಗಾ ಇಡುವುದು ಕಷ್ಟ ಎಂದು ಅರಿತು ಅರಣ್ಯ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಬರುವ ಪ್ರವಾಸಿತಾಣಗಳ ಪ್ರವೇಶ ನಿರಾಕರಿಸಿದೆ.
ಪ್ರಸ್ತುತ ಪ್ರಸಿದ್ಧ ಸಾತೊಡ್ಡಿ ಜಲಪಾತ, ಶಿರಲೆ ಜಲಪಾತ, ಕುಳಿ ಮಾಗೋಡು ಜಲಪಾತಕ್ಕೆ ತೆರಳಲು ಅವಕಾಶವಿಲ್ಲ. ಜೊತೆಗೆ ಫಣಸಗುಳಿ ಸೇತುವೆ ಮೇಲೆ ಅಪಾಯಕಾರಿ ರೀತಿಯಲ್ಲಿ ನೀರಿನ ಹರಿವು ಇದ್ದಿದ್ದರಿಂದ ಇಲ್ಲಿ ಸಹ `ಪ್ರವೇಶವಿಲ್ಲ\’ ಎಂಬ ನಾಮಫಲಕ ಅಳವಡಿಸಲಾಗಿದೆ. ಇನ್ನೂ, ಜಲಪಾತಗಳ ಸಮೀಪ ಮನೆಗಳನ್ನು ಹೊಂದಿರುವ ಸ್ಥಳೀಯರ ಓಡಾಟಕ್ಕೆ ಯಾವುದೇ ಸಮಸ್ಯೆ ಇಲ್ಲ.