ಎಲ್ಲವೂ ಅಂದುಕೊಂಡಂತೆ ನಡೆದರೆ, ಯಲ್ಲಾಪುರದ ಕಿರವತ್ತಿಯಲ್ಲಿ ಪೊಲೀಸ್ ಸಹಾಯವಾಣಿ ಕೇಂದ್ರ ವರ್ಷದ ಒಳಗೆ ಶುರುವಾಗಲಿದೆ.
ಕಿರವತ್ತಿ ಹಾಗೂ ಸುತ್ತಲಿನ ಪ್ರದೇಶದ ಜನ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಪೊಲೀಸ್ ನೆರವು ಪಡೆಯಲು ದೂರದ ಯಲ್ಲಾಪುರ ಪಟ್ಟಣಕ್ಕೆ ಬರಬೇಕಿತ್ತು. ಅದರಲ್ಲಿಯೂ ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ಸಮುದಾಯದವರಿಗೆ ಪೊಲೀಸ್ ಠಾಣೆ ತಿರುಗಾಟ ದುಬಾರಿಯಾಗಿತ್ತು. ಈ ಬಗ್ಗೆ ಚಿಂತಿಸಿದ ಯಲ್ಲಾಪುರ ಸಿಪಿಐ ರಮೇಶ ಹನಾಪುರ್ \’ಕಿರವತ್ತಿಯಲ್ಲಿ ಪೊಲೀಸ್ ನೆರವು ಕೇಂದ್ರ\’ ಸ್ಥಾಪನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಕಿರವತ್ತಿಯಲ್ಲಿ ಆರೋಗ್ಯ ಇಲಾಖೆಯವರು ಬಳಸಿಕೊಳ್ಳುತ್ತಿದ್ದ ಪುರಾತನ ಕಟ್ಟಡವೊಂದಿದ್ದು, ಅದು ಪೊಲೀಸ್ ಇಲಾಖೆಗೆ ಸೇರಿದೆ. 20 ಗುಂಟೆ ಜಾಗ ಸಹ ಪೊಲೀಸ್ ಇಲಾಖೆಯ ಬಳಿಯಿದೆ. ಆ ಕಟ್ಟಡ ನವೀಕರಣಗೊಳಿಸಿ, ಅಲ್ಲಿ \’ಪೊಲೀಸ್ ನೆರವು ಕೇಂದ್ರ\’ ಸ್ಥಾಪಿಸುವ ಯೋಜನೆ ಅಧಿಕಾರಿಗಳ ಮುಂದಿದೆ.
ಈ ನೆರವು ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿ ವಿಶ್ರಾಂತಿ ಗೃಹ ಸಹ ಇರಲಿದೆ. ನಾಲ್ಕು ಸಿಬ್ಬಂದಿ ಸದಾ ಇಲ್ಲಿದ್ದು ಜನರ ಸಮಸ್ಯೆ ಆಲಿಸಲಿದ್ದಾರೆ. ಇದರಿಂದ ತುರ್ತು ಸನ್ನಿವೇಶದಲ್ಲಿ ಪೊಲೀಸರು ಯಲ್ಲಾಪುರದಿಂದ ಕಿರವತ್ತಿ ಕಡೆ ಓಡುವುದು ತಪ್ಪುತ್ತದೆ.
ಪೊಲೀಸ್ ಠಾಣೆಯಲ್ಲಿನ ಸಿಬ್ಬಂದಿ ವರ್ತನೆ ಬಗ್ಗೆ ನೆರವು ಪಡೆದವರು ಆನ್ಲೈನ್ ಮೂಲಕ ಮೇಲಧಿಕಾರಿಗಳೊಂದಿಗೆ ಅಭಿಪ್ರಾಯ ಹಂಚಿಕೊಳ್ಳುವ ವ್ಯವಸ್ಥೆಯೂ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಜಾರಿಯಲಿದ್ದು, ಒಟ್ಟಿನಲ್ಲಿ ಇಲ್ಲಿನ ಪೊಲೀಸರು ಇನ್ನಷ್ಟು \’ಜನಸ್ನೇಹಿ\’ ಆಗುತ್ತಿದ್ದಾರೆ.