ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಅಲ್ಪ ಬಿಡುವು ಪಡೆದಿದ್ದ ಮಳೆ ಭಾನುವಾರ ಮತ್ತೆ ಧಾರಾಕಾರವಾಗಿ ಸುರಿದಿದ್ದು, ಅಲ್ಲಲ್ಲಿ ಹಾನಿಯಾಗಿದೆ.
ಹೊನ್ನಾವರ, ಕುಮಟಾ, ಯಲ್ಲಾಪುರ ಹಾಗೂ ಕಾರವಾರದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಕುಮಟಾದ ವಾಲ್ಗಳ್ಳಿ ಬಳಿಯ ಕೋಟೆಗುಡ್ಡೆ ರಘು ಮುಕ್ರಿ ಅವರ ಮಣ್ಣಿನ ಮನೆ ನೆಲ ಕಚ್ಚಿದೆ. ಅದೇ ಊರಿನ ವಿಷ್ಣು ಮುಕ್ರಿ ಅವರ ಮನೆಯ ಗೋಡೆಗಳು ಮುರಿಯುವ ಹಂತದಲ್ಲಿದೆ. ರಘು ಮನೆಯಲ್ಲಿನ ಪಾತ್ರೆಗಳೆಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿದೆ. ರಘು ಹಾಗೂ ವಿಷ್ಣು ಇಬ್ಬರನ್ನು ಜಿಲ್ಲಾಡಳಿತ ಸಮೀಪದ ಶಾಲೆಗೆ ರವಾನಿಸಿದೆ. ಅಲ್ಲಿ ಅವರಿಗೆ ತಾತ್ಕಾಲಿಕವಾಗಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ.